ಕರ್ನಾಟಕ

karnataka

ETV Bharat / state

ಬಿಜೆಪಿಯಿಂದ ಸಂವಿಧಾನದ ಆಶಯಗಳಿಗೆ ಕೊಡಲಿ ಪೆಟ್ಟು: ಕಾಂಗ್ರೆಸ್​​ ಎಂಎಲ್​ಸಿ ವಾಗ್ದಾಳಿ

ಇಂದು ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಎಂಎಲ್​ಸಿ ನಜೀರ್, ಕೇಂದ್ರ ಬಿಜೆಪಿ ನಾಯಕರು, ಅವರು ತಂದಿರುವ ನೀತಿ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Congress MLC Nazeer Ahmed outrage against BJP
ಬಿಜೆಪಿ ವಿರುದ್ಧಗುಡುಗಿದ ಕಾಂಗ್ರೆಸ್ ಎಂಎಲ್​ಸಿ ನಜೀರ್

By

Published : Mar 16, 2020, 3:52 PM IST

ಬೆಂಗಳೂರು:ಸಂವಿಧಾನ ಇಂದು ನಮಗೆ‌ ಎಲ್ಲವನ್ನೂ ಕೊಟ್ಟಿದೆ. ಜೀವಿಗಳ ಬದುಕಿಗೆ ನಿಸರ್ಗದ ಕೊಡುಗೆ ಹೇಗಿದೆಯೋ ಭಾರತೀಯರ ಬದುಕಿಗೆ ಸಂವಿಧಾನವೂ ಅದೇ ರೀತಿಯ ಸಮಾನ ಹಕ್ಕು ಹಾಗೂ ಅವಕಾಶ ಕಲ್ಪಿಸಿದೆ. ಅಂತಹ ಸಂವಿಧಾನದ ಆಶಯಕ್ಕೆ ಇಂದು ಕೊಡಲಿ ಪೆಟ್ಟು ಬೀಳುವ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಎಲ್​ಸಿ ನಜೀರ್ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ಸಂವಿಧಾನದ ಮೇಲಿನ‌‌‌ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ‌ ಅವರು, ತ್ರಿವಳಿ ತಲಾಖ್​​ ನಿಷೇಧ ಕಾಯ್ದೆಯನ್ನು ಒಂದು ಸಮುದಾಯ ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆಯುತ್ತಿರುವ ಧರಣಿಗಳಲ್ಲಿ‌ ಮಹಿಳೆಯರೂ ಇದ್ದಾರೆ. ಅವರಿಗೆ ಏನು ಮಾಡಿದ್ದೀರಿ? ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿದ್ದರೂ ಅದರ ವಿರೋಧಿ ಹೋರಾಟ ನಡೆಯಿತು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಜನನ, ಮರಣ ಪ್ರಮಾಣ ಪತ್ರವನ್ನೂ ಸಂವಿಧಾನದ ಅಡಿಯಲ್ಲಿಯೇ ಪಡೆಯಬೇಕು. ಇಂದು ಎನ್​​ಪಿಆರ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ರಾಜ್ಯಸಭೆಯಲ್ಲಿ ಒಂದು ಹೇಳಿದರೆ, ಲೋಕಸಭೆಯಲ್ಲಿ ಒಂದು ಹೇಳುತ್ತಾರೆ. ಸದನದ ಹೊರಗೆ ಸಾರ್ವಜನಿಕ ಸಮಾರಂಭದಲ್ಲಿ ಮತ್ತೊಂದು ರೀತಿ ಹೇಳಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಈ ವಿಚಾರದಲ್ಲಿ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ಅರ್ಜಿಯಲ್ಲಿ ಡೌಟ್​​ ಫುಲ್‌ ಕಾಲಂ ಇರಲ್ಲ ಎಂದಿದ್ದರು. ಆದರೆ, ಮಾಹಿತಿ ತೃಪ್ತಿ ಇಲ್ಲ ಎಂದರೆ ಡೌಟ್ ಫುಲ್ ಎಂದು ಬರೆಯಲು ಹೊಸದಾಗಿ ಬಿಡುಗಡೆ‌ ಮಾಡಿರುವ ಫಾರಂನಲ್ಲಿ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ಹಾಗೆ ಹೇಳಿ ಫಾರಂನಲ್ಲಿ ಈ ರೀತಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಈ ದೇಶಕ್ಕೆ ನಮ್ಮ ಸಮುದಾಯದ ಕೊಡುಗೆ ಇಲ್ಲವೇ? ಅಬ್ದುಲ್ ಕಲಾಂ‌ ಸೇರಿದಂತೆ ಸಾಕಷ್ಟು ಜನ‌ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಅಲ್ಪಸಂಖ್ಯಾತ ಸಮುದಾಯದ ಕೊಡುಗೆಯನ್ನು ಉದಾಹರಿಸಿದರು. ಕೇಂದ್ರ ಸಚಿವರೊಬ್ಬರು ಗೋಲಿ ಮಾರೋ ಅಂತಾ ಹೇಳ್ತಾರೆ. ಯಾರಿಗೆ ಗೋಲಿ ಮಾರೋ ಎನ್ನುತ್ತೀರಿ? ಸಂವಿಧಾನದ ಆಶಯ ಎಲ್ಲಿಗೆ ಬಂತು ಎಂದು ಕಿಡಿಕಾರಿದರು. ಇಂದು ಎಲ್ಲರಿಗೂ ಅಧಿಕಾರದಲ್ಲಿ‌ ಇರುವುದೇ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ನಾವೇನು ಬಿಟ್ಟು ಹೋಗುತ್ತೇವೆ ಎನ್ನುವುದು ಯಾರಿಗೂ ಬೇಕಿಲ್ಲ. ‌ಇಂದು ನಾಲ್ಕಾರು ಸ್ಥಾನದ ವ್ಯತ್ಯಾಸವಿದ್ದರೆ ಸಾಕು. ಏನು ಬೇಕಾದರೂ ಮಾಡಬಹುದು ಎನ್ನುವಂತಾಗಿದೆ ಎನ್ನುತ್ತಾ ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಪ್ರಸ್ತಾಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಲು ಮುಂದಾದ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ತಡೆದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಫಲಾನುಭವಿಗಳು ಅಂತಾ ಹೇಳೋದಕ್ಕೆ ಹೊರಟಿದ್ದೀರಾ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಬ್ಬಾರ್, ‌ಫಲಾನುಭವಿಗಳು ಅಂತಲ್ಲ. ಫಲಾನುಭವಿಗಳಿಗೆ ಆದ ಅನ್ಯಾಯಗಳ ಹಿನ್ನೆಲೆಯಲ್ಲಿ ಹೇಳುತ್ತಿದ್ದೇವೆ. ವಿಧಾನಸಭೆಯಲ್ಲಿ‌ ಈ ಬಗ್ಗೆ ಚರ್ಚೆ ನಡೆದಿದೆ. ಪರಿಷತ್​ನಲ್ಲಿ ಬೇಕಿದ್ದರೂ ಚರ್ಚಿಸಲು ಸಿದ್ಧರಿದ್ದೇವೆ ಎಂದು ಟಾಂಗ್ ಕೊಟ್ಟರು.

ABOUT THE AUTHOR

...view details