ಬೆಂಗಳೂರು:ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾಗಾಂಧಿ ಭವನದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಆ ಬಳಿಕ ಸರ್ಕಾರ ರಚನೆ ಕುರಿತು ರಾಜ್ಯಪಾಲರನ್ನು ಭೇಟಿಯಾಗಲು ಸಿದ್ದರಾಮಯ್ಯ ಮತ್ತು ಡಿಕೆಶಿ ಒಂದೇ ವಾಹನದಲ್ಲಿ ರಾಜಭವನಕ್ಕೆ ತೆರಳಿದರು.
ಸಭೆ ಆರಂಭವಾಗುತ್ತಿದ್ದಂತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವಂತೆ ಒಂದು ಸಾಲಿನ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಕ್ಕೆ ಭಾಗವಹಿಸಿದ್ದ ಎಲ್ಲ 135 ಶಾಸಕರು ಅನುಮೋದನೆ ನೀಡಿದರು. ಈ ಮೂಲಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಆಯ್ಕೆ ಆದರು. ಉಭಯ ನಾಯಕರ ನೇತೃತ್ವದಲ್ಲಿ ಶಾಸಕಾಂಗ ಸಭೆಯಲ್ಲಿ ಹಿರಿ ಕಿರಿಯ ಶಾಸಕರೆಲ್ಲ ಭಾಗಿಯಾಗಿದ್ದರು.
20 ನಿಮಿಷಕ್ಕೆ ಮುಗಿದ ಸಭೆ:ಕಾಂಗ್ರೆಸ್ ಶಾಸಕಾಂಗ ಸಭೆ ಕೇವಲ 20 ನಿಮಿಷಕ್ಕೆ ಮುಕ್ತಾಯವಾಯಿತು. ಇಂದು ಎಂಟು ಮೂವತ್ತಕ್ಕೆ ರಾಜ್ಯಪಾಲರ ಸಮಯ ಕೋರಲಾಗಿದ್ದು ಈ ಹಿನ್ನಲೆ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದರು. ಶನಿವಾರ ಮಧ್ಯಾಹ್ನ 12:30ಕ್ಕೆ ನೂತನ ಸರ್ಕಾರದ ಪದಗ್ರಹಣ ಸಮಾರಂಭ ನಡೆಯಲಿದ್ದು ತಾವು ಅದನ್ನು ನಡೆಸಿ ಕೊಡುವಂತೆ ಮನವಿ ಮಾಡಿದರು.
ಶನಿವಾರ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಲಿದ್ದು ಇವರೊಂದಿಗೆ ಎಷ್ಟು ಮಂದಿ ಸಚಿವರು ಪದಗ್ರಹಣ ಮಾಡಬೇಕು ಎಂಬ ವಿಚಾರವಾಗಿ ಚರ್ಚೆ ನಡೆದಿದೆ. ಸಾಕಷ್ಟು ಶಾಸಕರು ಸಚಿವ ಸ್ಥಾನ ಆಕಾಂಕ್ಷೆ ಗಳಾಗಿದ್ದು ನಿಯೋಜಿತ ಸಿಎಂ ಹಾಗೂ ಡಿಸಿಎಂ ಮೇಲೆ ಹೆಚ್ಚಿನ ಒತ್ತಡ ಮೂಡಿಬರಲಿದೆ. ಅತ್ಯಂತ ಪ್ರಮುಖವಾಗಿ ಜಾತಿವಾರು ಹಾಗೂ ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಿಕೆ ಮಾಡುವಂತೆ ಶಾಸಕರು ಒತ್ತಡ ಹೇರುತ್ತಿದ್ದಾರೆ.