ಬೆಂಗಳೂರು: ಮಾಜಿ ಸಚಿವರು, ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಇಂದು ಮಾಜಿ ಸಚಿವರುಗಳಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ ಹಾಗೂ ಮುಖಂಡರಾದ ಮಾಗಡಿ ಬಾಲಕೃಷ್ಣ, ಬಸವರಾಜ ಹೊರಟ್ಟಿ, ಸಿ.ಎಂ.ಇಬ್ರಾಹಿಂ, ಎಲ್.ಹನುಮಂತಯ್ಯ, ಭೈರತಿ ಸುರೇಶ್ ಸೇರಿದಂತೆ ಹಲವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ರಾಜ್ಯಕ್ಕೆ ಕೇಂದ್ರದ ನೆರವು ವಿಳಂಬವಾಗಿದೆ. ರಾಜ್ಯದ ದುರದೃಷ್ಟ ಯಾವಾಗಲೂ ಹೀಗೆಯೇ. ಜನ 25 ಸಂಸದರನ್ನ ಆರಿಸಿ ಕಳಿಸಿದ್ದಾರೆ. ಇವರು ಕೇಂದ್ರದ ಮೇಲೆ ಒತ್ತಡ ಹೇರುವುದು ಬೇಡ. ಕನಿಷ್ಠಪಕ್ಷ ಮನವೊಲಿಸೋಕೂ ಆಗಲ್ವಾ?. ಸಂಸದರು ಬೇರೆಯವರನ್ನ ತೆಗಳೋದು ಬಿಟ್ಟು ಇಲ್ಲಿನ ಸಮಸ್ಯೆಗಳನ್ನ ಮೋದಿಯವರಿಗೆ ಹೇಳಲಿ. ಹೆಚ್ಚಿನ ಪರಿಹಾರವನ್ನ ತರಲಿ ಎಂದರು. ಜೊತೆಗೆ, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಇನ್ನೂ ಚಿಕ್ಕವರು. ಅವರು ಇಲ್ಲಸಲ್ಲದ ಹೇಳಿಕೆ ನೀಡುವುದು ಬೇಡ ಎಂದರು.