ಬೆಂಗಳೂರು: ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾಹಿತಿ ದೊರೆತಿದೆ.
ಸೋಮವಾರ ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿ ಭಾಗದಲ್ಲಿ ಸತೀಶ್ ಜಾರಕಿಹೊಳಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಇದೀಗ ಬಿಜೆಪಿ ಪಾಳಯದಲ್ಲಿ ಕೂಡ ಬೆಳಗಾವಿ ಭಾಗದ ಪ್ರಮುಖ ನಾಯಕರಾಗಿ ಸಚಿವ ರಮೇಶ್ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಸೋದರರ ನಡುವೆಯೇ ಸ್ಪರ್ಧೆ ಏರ್ಪಟ್ಟರೆ ಗೆಲುವು ನಿರ್ಣಾಯಕ ಆಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿದೆ.
ಈ ಹಿನ್ನೆಲೆ ಸಾಕಷ್ಟು ಸಮಾಲೋಚನೆ ನಡೆಸಿ ಕಾಂಗ್ರೆಸ್ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಿನ್ನೆ ವಿಧಾನಸೌಧದಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಮಿತಿ ಉಸ್ತುವಾರಿ ಆಗಿರುವ ಹಾಗೂ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಜತೆ ರಾಜ್ಯ ನಾಯಕರು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂಬ ಮಾಹಿತಿಯಿದ್ದು, ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಲು ಒಪ್ಪುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ ನಾಯಕರ ಸಭೆ ಸತೀಶ್ ಜಾರಕಿಹೊಳಿ ಆಯ್ಕೆಯ ಬಗ್ಗೆ ನಿನ್ನೆಯ ಸಭೆಯಲ್ಲಿ ಒಮ್ಮತ ಮೂಡಿದೆ. ಆದರೆ ಈ ಸಂಬಂಧ ಸತೀಶ್ ಜಾರಕಿಹೊಳಿ ಜೊತೆ ಮುಖಂಡರು ಪ್ರತ್ಯೇಕವಾಗಿ ಚರ್ಚೆ ನಡೆಸಿಲ್ಲ. ಅಲ್ಲದೆ ಬೆಳಗಾವಿ ವಿಭಾಗದ ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಯಾವುದೇ ರೀತಿಯಲ್ಲೂ ಅಭ್ಯರ್ಥಿ ಘೋಷಣೆ ಅಧಿಕೃತ ಎಂದು ಹೇಳಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇನ್ನೂ ಹಲವು ನಾಯಕರ ಹೆಸರುಗಳು ಕೂಡ ಸಭೆಯಲ್ಲಿ ಪ್ರಸ್ತಾಪವಾಗಿವೆ. ಒಟ್ಟಾರೆ ಕಾಂಗ್ರೆಸ್ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸತತ ಸೋಲಿನ ನಂತರ ಒಮ್ಮೆಯಾದರೂ ಗೆಲ್ಲುವ ಎನ್ನುವ ಪ್ರಯತ್ನಕ್ಕೆ ಮುಂದಾಗಿದೆ.
ಓದಿ: ಬೆಳಗಾವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ: 'ಕೈ' ನಾಯಕರ ಸಭೆ
ಈ ಹಿಂದಿನ ಮೂರು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಶ್ ಅಂಗಡಿ ಅವರ ಗೆದ್ದಿದ್ದರು. ಇದೀಗ ಕೋವಿಡ್ ಸೋಂಕಿಗೆ ತುತ್ತಾಗಿ ನಿಧನರಾಗಿರುವ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಬಿಜೆಪಿಯೂ ಕ್ಷೇತ್ರಕ್ಕೆ ಇದೀಗ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದು ಯಾರೂ ಅಂತಿಮವಾಗಿಲ್ಲ. ಗೆಲ್ಲುವ ಅಭ್ಯರ್ಥಿ ಆಯ್ಕೆಗೆ ಎರಡು ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ.
2019ರ ಲೋಕಸಭೆ ಸುರೇಶ್ ಅಂಗಡಿ ಕಾಂಗ್ರೆಸ್ನ ವಿ.ಎಸ್. ಸಾಧುನವರ್ ವಿರುದ್ಧ 3,91,304 ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದರು. 2014ರಲ್ಲಿ ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ 75,860 ಮತಗಳ ಅಂತರದ ಗೆಲುವು ಸಾಧಿಸಿದ್ದರು. 2009ರ ಚುನಾವಣೆಯಲ್ಲಿ ಕೂಡ ಸುರೇಶ್ ಅಂಗಡಿ ಕಾಂಗ್ರೆಸ್ನ ಅಮರ್ ಸಿಂಗ್ ವಸಂತರಾವ್ ಪಾಟೀಲ್ ವಿರುದ್ಧ 1,18,687 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ಅತ್ಯಂತ ಸುಲಭವಾಗಿ ಇದುವರೆಗೂ ಲಭಿಸಿತ್ತು. ಇದಕ್ಕೆ ಬಿಜೆಪಿ ಪ್ರಾಬಲ್ಯ ಕಾರಣವೋ ಅಥವಾ ಸುರೇಶ್ ಅಂಗಡಿ ಕಾರಣ ಎಂಬ ಜಿಜ್ಞಾಸೆ ಈಗಲೂ ಇದೆ. ಈ ಚುನಾವಣೆ ಮತ್ತೊಮ್ಮೆ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರಮುಖವಾಗಿದ್ದು ಅಭ್ಯರ್ಥಿ ಆಯ್ಕೆಯ ಕಸರತ್ತು ಜೋರಾಗಿ ನಡೆದಿದೆ.