ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಸತತ ನಾಲ್ಕು ದಿನಗಳಿಂದ ವಿಚಾರಣೆ ನಡೆಸಿದ್ದ ಇಡಿ ಕೊನೆಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿದೆ. ಗಣೇಶ ಹಬ್ಬ ಇದ್ದರೂ ಬಿಡುವು ನೀಡದ ಇಡಿ ಅಧಿಕಾರಿಗಳು ನವ ದೆಹಲಿಯಲ್ಲಿ ಬಂಧಿಸಿದ್ದಾರೆ.
ಇಡಿ ಅಧಿಕಾರಿಗಳು ಡಿಕೆಶಿ ಬಂಧಿಸಿ, ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಿ, ಮೆಡಿಕಲ್ ಚಕ್ ಅಪ್ ನಡೆಸಲಿದ್ದಾರೆ. ಆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಕೊನೆಗೂ ಡಿಕೆಶಿ ಬಂಧಿಸಿದ ಇಡಿ ಕಳೆದ 4 ದಿನಗಳಿಂದ ದೆಹಲಿಯ ಜಾರಿ ನಿರ್ದೇಶನಾಲಯ ಆಫೀಸ್ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ಅಧಿಕಾರಿಗಳು ಸತತ ವಿಚಾರಣೆ ನಡೆಸಿದ್ದರು. ಆದರೆ, ವಿಚಾರಣೆಗೆ ಡಿ.ಕೆ. ಶಿವಕುಮಾರ್ ಸರಿಯಾಗಿ ಸಹಕರಿಸಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ಇ.ಡಿ. ಕಚೇರಿಯಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಅಥವಾ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಿದೆ. ಇಂದು ಕೋರ್ಟ್ ಸಮಯ ಮುಗಿದಿರುವುದರಿಂದ ನಾಳೆ ಮಾಜಿ ಸಚಿವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಈ ನಡುವೆ ಜಾರಿ ನಿರ್ದೇಶನಾಲಯ ಕಚೇರಿ ಎದುರು ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಕಾರು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರಕರಣದ ಹಿನ್ನೆಲೆ?
2017ರ ಆಗಸ್ಟ್ 2 ರಂದು ನವದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ, ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಸಂಬಂಧ ಐಟಿ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ ಅಧಿಕಾರಿಗಳು, ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನೋಟ್ ಬ್ಯಾನ್ ವೇಳೆ, ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಅಕ್ರಮವಾಗಿ ಬದಲಾಯಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದರು. ಅಷ್ಟೇ ಅಲ್ಲ ವಿದೇಶಗಳಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಬಂಧನಕ್ಕೂ ಮುನ್ನ ಇಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಮಂಗಳವಾರ ನವದೆಹಲಿಯಲ್ಲಿ ನಿವೃತ್ತ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಉಪಾಧ್ಯಕ್ಷ ತೋಲಾನಿ ಅವರೊಂದಿಗೆ ಚರ್ಚೆ ನಡೆಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದ್ರು. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಸಂಸತ್ ಸದಸ್ಯ ಡಿ.ಕೆ. ಸುರೇಶ್, ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ, ಶಾಸಕ ಶಿವಶಂಕರ ರೆಡ್ಡಿ, ಎಂಎಲ್ಸಿ ಸಿ.ಎಂ.ಲಿಂಗಪ್ಪ, ಶಾಸಕ ಟಿ.ವೆಂಕಟರಮಣಯ್ಯ ಮತ್ತು ಹಿರಿಯ ನಾಯಕರಾದ ಎಲ್.ಆರ್. ಶಿವರಾಮೇಗೌಡರು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ನೈತಿಕ ಬೆಂಬಲ ಸೂಚಿಸಿದ್ದರು.