ಬೆಂಗಳೂರು:ಸೆ.21 ರಂದು ಹೊಸಕೋಟೆಯಲ್ಲಿ ನಡೆಯುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆಯಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಹಾಗೂ ಇತರೆ ನಾಯಕರು ಭಾಗವಹಿಸಿದ್ದರು. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಸರಣಿ ರೂಪದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಇದರಲ್ಲಿ ಮೊದಲ ಸಭೆ ಹೊಸಕೋಟೆ ನಗರದಲ್ಲಿ ನಡೆಯಲಿದೆ. ಈ ಹಿಂದೆ ಹೊಸಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆ ಮುಂದೆ ಹೋಗಿತ್ತು. ಇದೀಗ ಬೃಹತ್ ಸಮಾವೇಶದ ಮೂಲಕ ಪಕ್ಷ ಸಂಘಟನೆ ಜೊತೆಗೆ ಅನರ್ಹರ ವಿರುದ್ಧ ಹೋರಾಟದ ಅಸ್ತ್ರ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
ರಾಣೆಬೆನ್ನೂರು ಸಭೆ:
ಜೊತೆಗೆ ರಾಣೆಬೆನ್ನೂರು ಕಾಂಗ್ರೆಸ್ ಮುಖಂಡರ ಸಭೆಯೂ ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಸಭೆಯ ಬಳಿಕ ಹರಿಹರ ಶಾಸಕ ರಾಮಪ್ಪ ಮಾತನಾಡಿ, ರಾಣೆಬೆನ್ನೂರು ಉಪಚುನಾವಣೆ ಬಗ್ಗೆ ಚರ್ಚೆಯಾಯ್ತು. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ. ಪಕ್ಷ ಸಂಘಟನೆಯ ಬಗ್ಗೆಯೂ ಸೂಚಿಸಿದ್ದಾರೆ. ಅಭ್ಯರ್ಥಿ ಅಂತಿಮದ ಬಗ್ಗೆ ತೀರ್ಮಾನವಾಗಿಲ್ಲ. ಕೆ.ಬಿ. ಕೋಳಿವಾಡ ಸೇರಿ ಹಲವರ ಹೆಸರು ಇದೆ. ಕೋಳಿವಾಡರಿಗೇ ಟಿಕೆಟ್ ಸಿಗುವ ಸಾಧ್ಯತೆಯಿದೆ. ಇನ್ನೂ ಕೆಲವರ ಹೆಸರಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕ್ಷೇತ್ರ ಗೆಲ್ಲೋಕೆ ಹೆಚ್ಚಿನ ಗಮನ ಹರಿಸುತ್ತೇವೆ ಎಂದರು.
ಬಿಜೆಪಿ ಸಂಪರ್ಕಿಸಿದ್ದು ನಿಜ:
ಇನ್ನೂ ಕಾಂಗ್ರೆಸ್, ಜೆಡಿಎಸ್ ಕೆಲ ಶಾಸಕರು ಬಿಜೆಪಿಗೆ ಹೋಗ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ಕಾಂಗ್ರೆಸ್ ಪಕ್ಷ ಗುರ್ತಿಸಿ ಟಿಕೆಟ್ ನನಗೆ ಕೊಟ್ಟಿದೆ. ಬಿಜೆಪಿಯವರು ಹಿಂದೆ ನನ್ನನ್ನ ಸಂಪರ್ಕಿಸಿದ್ದು ನಿಜ. ಆದರೆ ಈಗ ಯಾರೂ ನನ್ನನ್ನ ಸಂಪರ್ಕಿಸಿಲ್ಲ. ನಾವು ಪಕ್ಷಕ್ಕೆ ಅಂಟಿಕೊಂಡಿರುವವನು. ಯಾರು ಏನೇ ಮಾಡಿದರೂ ನಾನು ಪಕ್ಷ ಬಿಡಲ್ಲ ಎಂದರು.