ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ಸಿಎಂ ಬೊಮ್ಮಾಯಿ ಸೇರಿದಂತೆ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಅವರ ಜತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮತದಾರರ ಪಟ್ಟಿ ಅಕ್ರಮ ಸಂಬಂಧ ಗುರುವಾರ ದೂರು ನೀಡಿದರು.
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪೊಲೀಸ್ ಕಮಿಷನರ್ ಆಫೀಸರ್ಗೆ ಹೋಗಿ ಕಂಪ್ಲೇಂಟ್ ಫೈಲ್ ಮಾಡಿದ್ದೇವೆ. ಅವ್ರು ಮುಂದೆ ಯಾರಿಗೆ ಕಳಿಸ್ತಾರೋ ಕಳಿಸ್ಲಿ. ಯಾರ್ ಯಾರು ದುರುಪಯೋಗ ಮಾಡಿಕೊಂದಿದ್ದಾರೋ ಅವರ ಮೇಲೆ ದೂರು ನೀಡಿದ್ದೇವೆ ಎಂದರು.
ಸರ್ಕಾರಿ ನೌಕರರೆಂದು ಐಡೆಂಟಿಟಿ ಕಾರ್ಡ್ ಕೊಟ್ಟಿದ್ದಾರೆ. ಎಲೆಕ್ಷನ್ ಕಮೀಷನ್ ಮಾಡೋ ಕೆಲಸವನ್ನು ಬೇರೆ ಖಾಸಗಿಯವರಿಗೆ ಕೊಟ್ಟಿದ್ದಾರೆ. ತುಷಾರ್ ಗಿರಿನಾಥ್ ಸೀನಿಯರ್ ಐಎಎಸ್ ಅಧಿಕಾರಿ ಆಗಿದ್ದಾರೆ. ಈ ಕೆಲಸದಿಂದ ಅವರು ಗೌರವ ಕಳೆದುಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.
ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಕಾಂಗ್ರೆಸ್
ಒಂದು ಜಡ್ಜ್ಗೆ ಇರುವ ಅಥಾರಿಟಿ ಕಮಿಷನರ್ಗೆ ಇರುತ್ತೆ. ಚಿಲುಮೆ ಅಂತ ಹಿಂದೆ ಒಂದು ಹೆಸರು ಇತ್ತು. ಈಗ ಬದಲಾವಣೆ ಮಾಡಿದ್ದಾರೆ. ನಾವು ಮಾಡಿದ್ದು ಗಂಭೀರ ಆರೋಪ ಅಲ್ಲ. ಆದರೆ, ಸತ್ಯ. ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ ಹೊಂಬಾಳೆಯಿಂದ ಮತದಾರರ ಡೇಟಾ ಸಂಗ್ರಹ ಹಿನ್ನೆಲೆ ದೂರು ಸಲ್ಲಿಸಿದ್ದೇವೆ. ಮತದಾನದ ಹಕ್ಕನ್ನೇ ಕಿತ್ತುಕೊಳ್ಳುವ ದೊಡ್ಡ ಪ್ರಯತ್ನ ನಡೆದಿದೆ. 7-8 ಸಾವಿರ ಕಾರ್ಯಕರ್ತರು ಬಿಎಲ್ಓ ಐಡಿ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಸಚಿವ ಅಶ್ವತ್ಥನಾರಾಯಣ ಬಾಳ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಹರಿಹಾಯ್ದರು.
ಅವರ ಕಂಪನಿಗಳೆಲ್ಲ ಒಂದೇ ಅಡ್ರೆಸ್ನಲ್ಲಿವೆ. ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಕಾಂಗ್ರೆಸ್ 139 ಸೀಟು ಗೆಲ್ಲುತ್ತೆ ಅಂತ ಅವರ ಸರ್ವೆಯಲ್ಲೇ ಬಂದಿದೆ. ಬಿಜೆಪಿ ಕೆಲಸ ಪ್ರಜಾಪ್ರಭುತ್ವದ ಕಗ್ಗೊಲೆ. ಕೆಲವರ ಮತವನ್ನ ಬೇರೆಡೆ ಶಿಫ್ಟ್ ಮಾಡಿದ್ದಾರೆ. ನಮ್ಮ ಮೇಲೆ ಮಾನನಷ್ಟ ಕೇಸ್ ಹಾಕ್ತಾರಾ? ಹಾಕಲಿ ಬಿಡಿ ಅನುಭವಿಸೋಣ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದರು.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ
ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಮತದಾರರ ಪಟ್ಟಿ ಪರಿಷ್ಕರಣೆ ಖಾಸಗಿ ವ್ಯಕ್ತಿಗಳಿಂದ ನಡೆದಿದೆ. ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಜನಪ್ರತಿನಿಧಿ ಕಾಯ್ದೆಯಡಿ ದೂರು ಸ್ವೀಕರಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಕಾಂಗ್ರೆಸ್ನದ್ದು ಆಧಾರ ರಹಿತ ಆರೋಪ, ಅವರೆಲ್ಲ ವಿಚಾರಗಳಲ್ಲಿ ದಿವಾಳಿ: ಸಿಎಂ ಬೊಮ್ಮಾಯಿ