ಕರ್ನಾಟಕ

karnataka

By

Published : Jun 23, 2021, 5:20 PM IST

ETV Bharat / state

ಮುಂದಿನ ಸಿಎಂ ಪ್ರಸ್ತಾಪ ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಶಿಸ್ತು ಸಮಿತಿ: ಸಭೆ ಕರೆದ ರೆಹಮಾನ್ ಖಾನ್

ಬಹಿರಂಗ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಡಿ.ಕೆ ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದರೂ ಕಾಂಗ್ರೆಸ್ ಮುಖಂಡರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಗಲಾಟೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಶಿಸ್ತು ಸಮಿತಿ ಮಧ್ಯಪ್ರವೇಶಕ್ಕೆ ಮುಂದಾಗಿದೆ.

Congress disciplinary committee
ರೆಹಮಾನ್ ಖಾನ್

ಬೆಂಗಳೂರು: ಚುನಾವಣೆಗೆ ಎರಡು ವರ್ಷ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಚರ್ಚೆ ಆರಂಭವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಿಸ್ತು ಸಮಿತಿ ಮುಂದಿನ ವಾರ ಸಭೆ ನಡೆಸಲಿದೆ. ಕಾಂಗ್ರೆಸ್​ಲ್ಲಿ ಮುಂದಿನ ಸಿಎಂ ಆಯ್ಕೆ ಬಗ್ಗೆ ಈಗಲೇ ಗಲಾಟೆ ಆರಂಭವಾಗಿದೆ.

ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮ ನಾಯಕ್, ರಾಮಪ್ಪ, ತುಕಾರಾಂ, ಬಸವರಾಜ್ ಹಿಟ್ನಾಳ್, ಕಂಪ್ಲಿ ಗಣೇಶ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಸಾಕಷ್ಟು ಮಂದಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದಾರೆ.

ಬಹಿರಂಗ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಡಿ.ಕೆ ಶಿವಕುಮಾರ್ ಹಾಗೂ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದರೂ ಕಾಂಗ್ರೆಸ್ ಮುಖಂಡರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಗಲಾಟೆ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಶಿಸ್ತು ಸಮಿತಿ ಮಧ್ಯಪ್ರವೇಶಕ್ಕೆ ಮುಂದಾಗಿದೆ. ಮುಂದಿನ ವಾರ ಸಮಿತಿಯ ಸಭೆ ಕರೆದ ಅಧ್ಯಕ್ಷ ರೆಹಮಾನ್ ಖಾನ್ ಇಲ್ಲಿ ಕೂಲಂಕಷವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ.

ಸಂಘಟನೆಯ ಮಾರಕ ಹೇಳಿಕೆಯೂ ಸಹ ಪಕ್ಷ ವಿರೋಧಿ ಆಗುತ್ತದೆ. ಎಐಸಿಸಿ ನಾಯಕರ ಸೂಚನೆ ಕೊಟ್ಟರೂ ಸಹ ಹೇಳಿಕೆ ಕೊಡುತ್ತಿರುವುದಕ್ಕೆ ರೆಹಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಎಂಬ ಕುರಿತ ಚರ್ಚೆಯನ್ನು ಯಾರೂ ಮಾಡಬಾರದು ಎಂದು ಸೂಚಿಸಿದ್ದಾರೆ.

ಅಲ್ಲದೇ ಮುಂದಿನ ವಾರ ನಡೆಯುವ ಸಭೆಗೆ ಸಿಎಂ ವಿಚಾರವಾಗಿ ಹೇಳಿಕೆ ನೀಡಿರುವ ಎಲ್ಲ ಶಾಸಕರಿಗೂ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದಾರೆ.

ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಮಾತನಾಡಿ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷ ಸಂಘಟನೆ ವಿಚಾರವಾಗಿ ನಾಯಕರು ಒತ್ತು ಕೊಡಬೇಕೇ ಹೊರತು ಮುಂದಿನ ಸಿಎಂ ಯಾರು ಎಂಬ ಚರ್ಚೆಗೆ ಇದು ಉತ್ತಮ ಸಮಯ ಅಲ್ಲ. ಕಾಂಗ್ರೆಸ್​ನ ಎಲ್ಲ ನಾಯಕರು ಸಂಘಟನೆಯತ್ತ ಹೆಚ್ಚು ಗಮನಹರಿಸಿ ಎಂದು ಮತ್ತೊಮ್ಮೆ ಸೂಚಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆಯನ್ನು ದಿನಕ್ಕೊಬ್ಬ ಶಾಸಕರು ನೀಡುತ್ತಿದ್ದು, ಇದು ಪಕ್ಷದ ಬೆಳವಣಿಗೆಗೆ ಮಾರಕವಾಗಲಿದೆ. ಸಿಎಂ ಸ್ಥಾನವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದ್ದು, ಅಲ್ಲಿಯವರೆಗೂ ಈ ಚರ್ಚೆ ಬೇಡ ಎಂಬ ಮಾತನ್ನು ಆಡಿದ್ದಾರೆ.

ಒಟ್ಟಾರೆ ಕಳೆದ ಒಂದು ವಾರಗಳಿಂದ ನಿರಂತರವಾಗಿ ಸಿದ್ದರಾಮಯ್ಯ ಪರ ಕಾಂಗ್ರೆಸ್ ನಾಯಕರು ಎತ್ತಿರುವ ದನಿ ಮುಂದಿನ ವಾರ ವಿಚಾರಣೆ ಹಂತಕ್ಕೆ ಬರಲಿದೆ. ಹೈಕಮಾಂಡ್ ನಾಯಕರ ಸೂಚನೆಯನ್ನು ಮೀರಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರು ಶಿಸ್ತು ಸಮಿತಿಗೆ ಯಾವ ರೀತಿ ಸಮಜಾಯಿಷಿ ನೀಡಲಿದ್ದಾರೆ ಎನ್ನುವುದು ಮುಂದಿನ ವಾರ ತಿಳಿಯಲಿದೆ.

ABOUT THE AUTHOR

...view details