ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ದುರುದ್ದೇಶದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಆರೋಪಿಸಿದ್ದಾರೆ. ಕಾಂಗ್ರೆಸ್ನ ಕಾನೂನು ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು, ಬೆಂಗಳೂರಿನ ಎಸ್ಜೆ ಪಾರ್ಕ್ ಪೊಲೀಸ್ ಠಾಣಾಧಿಕಾರಿಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ಇವರು ನೀಡಿದ ದೂರಿನ ಸಾರಾಂಶ ಹೀಗಿದೆ..
ದೂರಿನಲ್ಲಿ ಏನಿದೆ?: 'ಇಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಪುರಭವನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೂಪಗೊಳಿಸಿದ ಭಾವಚಿತ್ರವನ್ನು ಬಳಸಿ 'ಸಿದ್ದು ನಿಜ ಕನಸುಗಳು' ಎಂಬ ಶೀರ್ಷಿಕೆಯಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವರಾದ ಅಶ್ವತ್ಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪಠ್ಯ ಪುಸ್ತಕ ಪುನರ್ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ವಿವಾದಾತ್ಮಕ ವ್ಯಕ್ತಿ ರೋಹಿತ್ ಚಕ್ರತೀರ್ಥ ಹಾಗೂ ಇತರ ವ್ಯಕ್ತಿಗಳು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿನ ಪುಸ್ತಕದ ಮುಖಪುಟ ಪ್ರತಿಪಕ್ಷ ನಾಯಕರ ಕುರಿತು ಅವಹೇಳನಕಾರಿ, ಕಪೋಲಕಲ್ಪಿತ, ಪ್ರಚೋದನಕಾರಿ ಲೇಖನಗಳನ್ನು ಒಳಗೊಂಡಿರುವುದು ಸ್ಪಷ್ಟವಾಗಿದೆ' ಎಂದು ಉಲ್ಲೇಖಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯ:ಆಹ್ವಾನ ಪತ್ರಿಕೆಯಲ್ಲಿ ಇರುವ ಅತಿಥಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಚಾರಗಳನ್ನು ಮತ್ತು ಒಂದು ಸಮುದಾಯದ ವಿರುದ್ಧ ಪ್ರಚೋದನೆ ನೀಡುವ ಬರಹಗಳನ್ನು ಪ್ರಕಟಿಸುವ ಮೂಲಕ ಅನೇಕ ವಿವಾದಗಳನ್ನು ಸೃಷ್ಟಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರ ಭಾವಚಿತ್ರ ವಿರೂಪಗೊಳಿಸಿ ಸಾಮರಸ್ಯ ಕದಡುವ ಹುನ್ನಾರ ಹೊಂದಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೆ ರದ್ದು ಮಾಡಬೇಕು ಮತ್ತು ಆಯೋಜಕರಿಗೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದು ಮಾಡಲು ಸೂಚನೆ ನೀಡಿ ಕ್ರಮ ಜರುಗಿಸಬೇಕೆಂದು ಕೋರುವುದಾಗಿ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.