ಬೆಂಗಳೂರು :ರೈತರ ಪಂಪ್ ಸೆಟ್ ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಯಂತ್ರಿಸಲು ಸಭಾಪತಿ ಎದ್ದು ನಿಲ್ಲಬೇಕಾಯಿತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವ ಭರವಸೆ ಮೂಲಕ ಸದನದಲ್ಲಿನ ಗದ್ದಲವನ್ನು ತಿಳಿಗೊಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರೈತರ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಕೊರತೆ ಎದುರಾಗಿದೆ. ವಿದ್ಯುತ್ ಪೂರೈಸಲು ತಾರತಮ್ಯವಾಗಿದೆ. ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ನೀರಾವರಿ ಆಧರಿಸಿ ಬೆಳೆ ಬೆಳೆಯುವವರಿಗೆ ಅನ್ಯಾಯವಾಗಿದೆ. 7 ಗಂಟೆಗಳ ಕಾಲ ವಿದ್ಯುತ್ ಕೊಡುತ್ತೇವೆ ಎಂದು ಸರ್ಕಾರ ವಾಗ್ದಾನ ಮಾಡಿದೆ. ನಾನು ಬರ ಅಧ್ಯಯನಕ್ಕೆ ಹೋಗಿದ್ದೆ. ಹಗಲು ಎರಡು ಗಂಟೆ, ರಾತ್ರಿ ಒಂದು ಗಂಟೆ ತ್ರೀಫೇಸ್ ವಿದ್ಯುತ್ ಬರುತ್ತಿದೆ. ಆರ್ಜೆಂಟ್ನಲ್ಲಿ ಪಂಪ್ ಸೆಟ್ ಗಳು ಶುರು ಮಾಡಲು ಹೋದರೆ ಸುಟ್ಟು ಹೋಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಇದಕ್ಕೆ ಏನು ಪರಿಹಾರ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ಬದಲಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬರಗಾಲದ ಕಾರಣ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗಿದೆ. ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಒಂದೂವರೆ ತಿಂಗಳು ತೊಂದರೆ ಆಗಿತ್ತು. ಈಗ ರೈತರಿಗೆ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಎಲ್ಲೆಲ್ಲಿ ಬೇಡಿಕೆಯಿದೆಯೋ ಅಲ್ಲಿ ವಿದ್ಯುತ್ ನೀಡುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ವಿದ್ಯುತ್ ಹೊರ ರಾಜ್ಯಗಳಿಗೆ ನೀಡುವಂತಿಲ್ಲ ಎಂದು ಮಾಡಿದ್ದೇವೆ.
ರೈತರಿಗೆ ಏಳು ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ರೈತರ ಕೃಷಿ ಪಂಪ ಸೆಟ್ ಗೆ ಸರ್ಕಾರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಭತ್ತ ಮತ್ತು ಕಬ್ಬು ಬೆಳೆಗಳ ಕಟಾವು ಪೂರ್ವ ಅವಧಿಯಲ್ಲಿ 7 ಗಂಟೆಗೂ ಹೆಚ್ಚು ಅವಧಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲ ಪ್ರದೇಶಗಳಲ್ಲಿ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ರಾತ್ರಿ 3 ಗಂಟೆ, ಹಗಲು 3 ಗಂಟೆ ನೀಡಲಾಗುತ್ತಿದೆ. ಕೆಲ ಸಮಯದಲ್ಲಿ ಲಭ್ಯತೆ ಅಥವಾ ಉತ್ಪಾದನೆ ಕುಂಠಿತಗೊಂಡು ಸೀಮಿತ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಸದನಕ್ಕೆ ವಿವರಿಸಿದರು.
ವಿದ್ಯುತ್ ಕೊರತೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಉತ್ತರಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸುಳ್ಳು ಹೇಳಲು ಒಂದು ಲಿಮಿಟ್ ಇರಬೇಕು ಎಂದು ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಈ ವೇಳೆ ಅಡಳಿತ ಮತ್ತು ವಿಪಕ್ಷ ಸದಸ್ಯರಿಂದ ಸದನದಲ್ಲಿ ಗದ್ದಲ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸದನವನ್ನು ನಿಯಂತ್ರಣ ಮಾಡಲು ಎದ್ದು ನಿಂತ ಸಭಾಪತಿ ಬಸವರಾಜ ಹೊರಟ್ಟಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಂತರ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಗದ್ದಲ ಕೈಬಿಟ್ಟರು.