ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ನಡೆಸಿದ ಮೌನ ಪ್ರತಿಭಟನೆ ಸಂದರ್ಭ ನಟಿ ಹಾಗೂ ಕಾಂಗ್ರೆಸ್ ನಾಯಕಿ ಭಾವನಾ ಅವರನ್ನು ಪಕ್ಷದ ಕಾರ್ಯಕರ್ತರೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕಾಂಗ್ರೆಸ್ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದ ನಟಿ ಭಾವನಾಗೆ ಕಾರ್ಯಕರ್ತರಿಂದ ತರಾಟೆ ಮೌನ ಪ್ರತಿಭಟನೆ ಆರಂಭವಾದ ಕೆಲ ಹೊತ್ತಿನ ನಂತರ ಆಗಮಿಸಿದ ಭಾವನಾ ಅವರು ವೇದಿಕೆ ಬಳಿ ಬರುತ್ತಿದ್ದಂತೆ ಕಾರ್ಯಕರ್ತರು ಕೆರಳಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಆಚೆ ತೆರಳಿದ್ದರು. ಭಾವನಾ ಅವರನ್ನು ಕಂಡು ವೇದಿಕೆಯ ಹಿಂಭಾಗದಲ್ಲಿ ಕುಳಿತಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದರು.
ಕಾಂಗ್ರೆಸ್ ಪಕ್ಷವನ್ನ ಬಿಟ್ಟು ತಾವು ಬಿಜೆಪಿಗೆ ಸೇರ್ಪಡೆ ಆಗಿದ್ದಿರಿ. ಇದೀಗ ಏಕಾಏಕಿ ಹಿಂದಿರುಗಿ ಗಣ್ಯರ ಜೊತೆ ಕೂರಲು ಬಂದಿರುವುದು ಸರಿಯಲ್ಲ. ಬೇರೆ ಕಡೆ ಹೋಗಿ ಕುಳಿತುಕೊಳ್ಳಿ ಎಂದು ಗದರಿಸಿದರು.
ಕಾರ್ಯಕರ್ತರಿಂದ ಅವಮಾನ: ಪ್ರತಿಭಟನೆ ವೇಳೆ ದಿಢೀರ್ ಎದುರಾದ ಆಕ್ರೋಶದಿಂದ ನಟಿ ಭಾವನಾಗೆ ಮುಜುಗರ ಉಂಟಾಯಿತು. ಪ್ರತಿಭಟನೆಗೆ ಬಂದ ಭಾವನಾಗೆ ಚೇರ್ ಸಿಗದೆ ಪರದಾಟ ನಡೆಸಬೇಕಾಯಿತು. ಕುರ್ಚಿ ಸಿಗದೇ ಪರದಾಡಿದ ನಟಿ ಭಾವನಾ ಎದುರು ಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮೀಸಲಿಟ್ಟಿದ್ದ ಆಸನದಲ್ಲಿ ಕುಳಿತರು. ಕೆಲ ಕಾಲ ಅಲ್ಲಿ ಕುಳಿತ ಬಳಿಕ ವೇದಿಕೆಯ ಮೇಲೆ ಪಕ್ಷದ ಕಾರ್ಯಕರ್ತರು ಆಸನ ವ್ಯವಸ್ಥೆ ಮಾಡಿಕೊಟ್ಟರು.
ಸಮಾಧಾನ ಮಾಡಲು ಮುಂದಾದ ನಟಿ:ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ..? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ ಎಂದು ತರಾಟೆ ತೆಗೆದುಕೊಂಡಾಗ ಗಲಿಬಿಲಿಯಾಗಿ ಸಮಾಧಾನ ಮಾಡಲು ಮುಂದಾದ ನಟಿ ಭಾವನಾ, ನಾನು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ನನಗೆ ಬಿಜೆಪಿ ಪಕ್ಷದಲ್ಲಿ ಹೊಂದಿಕೊಳ್ಳಲು ಆಗದ ಹಿನ್ನೆಲೆ ಕೋವಿಡ್ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಿದ್ದೇನೆ. ಆದರೆ, ಆ ಸಂದರ್ಭದಲ್ಲಿ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಸಿ ನೀಡಿದರು. ಆದರೆ, ಕೇಳುವ ವ್ಯವಧಾನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಣಲಿಲ್ಲ.
ಓದಿ:ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರವೇನು?