ಬೆಂಗಳೂರು: ಇಂದು ನಿಧನರಾದ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ಗೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸಂದೇಶದಲ್ಲಿ ಆಸ್ಕರ್ ಅವರ ಗುಣಗಾನ ಮಾಡಿದರು.
ಮಾಜಿ ಕೇಂದ್ರ ಸಚಿವರು, ಮಾಜಿ ಲೋಕಸಭೆಯ ಸದಸ್ಯರು ಹಾಗೂ ಹಾಲಿ ರಾಜ್ಯಸಭೆಯ ಸದಸ್ಯರಾಗಿದ್ದ ಆಸ್ಕರ್ ಸರಳ ಸಜ್ಜನಿ ವ್ಯಕ್ತಿತ್ವದ ಧೀಮಂತ ನಾಯಕರಾಗಿದ್ದರು. ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಕೇಂದ್ರದಲ್ಲಿ ಸಾಂಖ್ಯಿಕ ಮತ್ತು ಕಾರ್ಯಕ್ರಮ ಇಲಾಖೆಯ ರಾಜ್ಯ ಸಚಿವರಾಗಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾಗಿ, ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವರಾಗಿ ಹಾಗೂ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಾಗಿ ಆಪಾರ ಸೇವೆಯನ್ನು ಸಲ್ಲಿಸಿದ್ದರು. ಫರ್ನಾಂಡಿಸ್ ನಿಧನದಿಂದಾಗಿ ರಾಜ್ಯ ಹಾಗೂ ರಾಷ್ಟ್ರವು ಹಿರಿಯ ಸರಳ ಸಜ್ಜನ ವ್ಯಕ್ತಿತ್ವದ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.
ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದೆ. ಸಜ್ಜನ ರಾಜಕಾರಣಿಗೆ ಉತ್ತಮ ಉದಾಹರಣೆಯಾಗಿದ್ದರು. ಸಾರ್ವಜನಿಕ ಬದುಕಿನಲ್ಲಿ ಉತ್ತಮ ಹೆಸರು ಹೊಂದಿದ್ದರು. ಮುಂದೇನಾಗಬೇಕು, ರಾಜ್ಯದ ಜನ ಜೀವನ ಹೇಗೆ ಸಾಗಬೇಕು ಎಂಬ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುತ್ತಿದ್ದರು. ನಮ್ಮ ಸಮಕಾಲೀನ ಆದರ್ಶಪ್ರಾಯವಾದ ರಾಜಕಾರಣಿಯಾಗಿದ್ದರು. ಕೇಂದ್ರ ಮಟ್ಟದಲ್ಲಿ ರಾಜ್ಯದ ಗೌರವಯುತ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿದರು.