ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದು ಹೈಕಮಾಂಡ್ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಆಯ್ಕೆ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಈ ಬಗ್ಗೆ ಹೈಕಮಾಂಡ್ ಪ್ರಕ್ರಿಯೆ ನಡೆಸುತ್ತಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ ಕೊಡಬೇಕು. ಇದು ಹಿಂದಿನಿಂದಲೂ ಇರುವ ಪದ್ಧತಿ. ಸಿದ್ದರಾಮಯ್ಯ ಸಿಎಲ್ಪಿ ಲೀಡರ್ ಆಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಾವು ಸಾಮೂಹಿಕ ನಾಯಕತ್ವ ಎಂದು ಹೋಗಿದ್ದೆವು. ಈಗ ಅಧಿಕಾರ ಬಂದಿದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಜೊತೆ ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಶಕ್ತಿ ಪ್ರದರ್ಶನ ಅಲ್ಲ. ಕೆಲವು ಶಾಸಕರು ಅವರ ನಾಯಕರ ಜೊತೆ ಹೋಗಿರುತ್ತಾರೆ. ಅದನ್ನು ಶಕ್ತಿ ಪ್ರದರ್ಶನ ಎನ್ನುವುದು ಸರಿಯಲ್ಲ. ನಾವು ಸಹ ಶಾಸಕರನ್ನು ಕರೆದುಕೊಂಡು ಹೋಗಬಹುದು. ಆದರೆ ನಾವು ಹೋಗುವುದಿಲ್ಲ. ಕೆಲವರು ಹೋಗಿದ್ದಾರೆ ಅಷ್ಟೆ ಎಂದರು.
2013ರಲ್ಲಿ ಪರಮೇಶ್ವರ್ಗೆ ಅನ್ಯಾಯ ಆಯ್ತು. ಈ ಬಾರಿ ಅದನ್ನು ಹೈಕಮಾಂಡ್ ಸರಿ ಮಾಡುತ್ತ ಎಂಬ ಪ್ರಶ್ನೆಗೆ, ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. ನಾನು 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡಲ್ಲ. ನನಗೆ ಕೆಲವು ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಾನು ಖಂಡಿತ ಮಾಡ್ತೀನಿ. ಅವಕಾಶ ಕೊಟ್ಟರೆ ಮಾಡೊಲ್ಲ ಅಂತ ಹೇಳಲ್ಲ. ಹೈಕಮಾಂಡ್ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಎಲ್ಲವೂ ಗೊತ್ತಿದೆ. ಲಾಬಿ ಮಾಡಬಾರದು ಎಂದು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಅಂದರೆ ಅಸಮರ್ಥ ಎಂದು ಅರ್ಥ ಅಲ್ಲ. ನಾನು ಕೂಡ ಸಮರ್ಥನೇ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಟಾಂಗ್ ನೀಡಿದರು.
ಕಾಂಗ್ರೆಸ್ ಗ್ಯಾರಂಟಿ ವಿಚಾರ ಮಾತನಾಡಿ, ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತದೆ ಎಂದು ಹೇಳಿದರು. ಮೊದಲ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ. ಮೊದಲ ಕ್ಯಾಬಿನೆಟ್ ನಲ್ಲಿ ಇವುಗಳನ್ನು ಜಾರಿ ಮಾಡ್ತೀವಿ. ಗ್ಯಾರಂಟಿಗಳ ಮೇಲೆ ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡ್ತೀವಿ. ಆಯಾ ಇಲಾಖೆ ಸಚಿವರು ಕುಳಿತು ಇದರ ಬಗ್ಗೆ ವರ್ಕ್ ಮಾಡಿ ಜಾರಿ ಮಾಡ್ತೀವಿ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ. ಹಾಗೇ ಕೊಟ್ಟರೆ ಎಲ್ಲರೂ ತಗೋತಾರೆ ಎಂದು ಹೇಳಿದರು.