ಬೆಂಗಳೂರು:ಉದ್ಯಮಿಗೆ ಲಂಚದ ಬೇಡಿಕೆ ಇಟ್ಟ ಎಎಸ್ಐ ವಿರುದ್ಧ ಎಸಿಬಿ ಮತ್ತು ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಸಲಾಗಿದೆ.
ಎಎಸ್ಐ ದಯಾನಂದ್ ಎಂಬಾತ ಲಂಚಕ್ಕೆ ಬೇಡಿಕೆಯಿಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಸ್ ಮುಚ್ಚಿ ಹಾಕಲು 10 ಲಕ್ಷ ಲಂಚ ಕೇಳಿದ್ದ ಈಶಾನ್ಯ ವಿಭಾಗದ ಡಿಸಿಪಿ ಆಪ್ತ ಎಂದು ಹೇಳಿಕೊಂಡ ಎಎಸ್ಐ ದಯಾನಂದ್ ಸ್ವಾಮಿ 5 ಲಕ್ಷ ರೂ. ಲಂಚ ಪಡೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಲ್ಲೇಶ್ವರಂ ಮೂಲದ ಭರತ್ ಶೆಟ್ಟಿ ಎನ್ನುವ ಉದ್ಯಮಿಯೊಬ್ಬರು ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.
ಉದ್ಯಮಿಗೆ ಲಂಚ ಬೇಡಿಕೆಯಿಟ್ಟ ಎಎಸ್ಐ ವಿರುದ್ಧ ಎಸಿಬಿಗೆ ದೂರು ರೋಲ್ ಕಾಲ್ ಎನ್ನುವುದು ಡಿಪಾರ್ಟ್ಮೆಂಟ್ ನಲ್ಲಿ ಅಧಿಕೃತವಾಗಿ ಸಂಭೋಧಿಸುವ ಶಬ್ದ. ಆದರೆ ಈ ಎಎಸ್ಐ ಅದನ್ನ ಬೇರೆ ರೀತಿಯಲ್ಲಿ ಸಿಕ್ಕ ಸಿಕ್ಕವರ ಬಳಿ ರೋಲ್ ಕಾಲ್ ಶುರು ಹಚ್ಚಿಕೊಂಡಿದ್ದ. ಉದ್ಯಮಿ ಭರತ್ ಮೇಲೆ ವಂಚನೆ , ಹಲ್ಲೆ ಕೇಸ್ ದಾಖಲಾಗಿತ್ತು. ಅದು ಸುಳ್ಳೊ ಸತ್ಯವೋ ಎನ್ನುವುದು ತನಿಖೆಯಾಗಬೇಕಿದೆ.
ಆದರೆ ಆ ಕೇಸ್ನ್ನು ಬಿ ರಿಪೋರ್ಟ್ ಮಾಡಿಸಿ ಕೊಡುತ್ತೇನೆ. 10 ಲಕ್ಷ ರೂ. ಫೀಸ್ ಆಗುತ್ತದೆ ಎಂದಿದ್ದರಂತೆ. 10 ಲಕ್ಷ ರೂ. ಬೇಡಿಕೆ ಈಡೇರಿಸದಿದ್ದಲ್ಲಿ ರೌಡಿ ಶೀಟರ್ ಎಂದು ಕೇಸ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆಯಂತೆ. ಇದಲ್ಲದೇ ಮತ್ತೆ 50 ಲಕ್ಷ ರೂ. ಲಂಚವನ್ನು ಕೇಳಿದ್ದಾರೆ. ಅಷ್ಟಲ್ಲದೆ ಕುಳ್ಳ ಮಂಜ, ಕುಳ್ಳ ನಾಗ ಎಂಬ ರೌಡಿ ಸಹೋದರರಿಂದ ಭರತ್ ಮೇಲೆ ಮತ್ತೆ ಕೇಸ್ ಹಾಕಿಸಿದ್ದಾರಂತೆ. ಈ ಬೆಳವಣಿಗೆಯಿಂದ ಬೆದರಿದ ಭರತ್, ತನ್ನ ಸ್ನೇಹಿತರ ಮುಖಾಂತರ 5 ಲಕ್ಷ ಅಡ್ವಾನ್ಸ್ ನೀಡಿದ್ದಾರೆ.
ಈ ಕುರಿತು ಎಸಿಬಿ ಮತ್ತು ಪೊಲೀಸ್ ಕಮಿಷನರ್ಗೆ ಉದ್ಯಮಿ ಭರತ್ ಶೆಟ್ಟಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಎಸ್ಐ ದಯಾನಂದ್ ಎಸ್ಕೇಪ್ ಆಗಿದ್ದಾರೆ.