ಬೆಂಗಳೂರು: ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಸಾಮಾಜಿಕ ಕಾರ್ಯಕರ್ತ ಜಗದೀಶ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಂತೆ ಮಾರ್ಚ್ 1ರಂದು ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದ ದಿನ ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಕ್ರಮ ಪ್ರವೇಶಿಸಿ ತಮ್ಮ ವೈಯಕ್ತಿಕ ಕೆಲಸ ಮಾಡಿಸಿಕೊಂಡಿರುವ ಆರೋಪ ನಾರಾಯಣಸ್ವಾಮಿ ವಿರುದ್ಧ ಕೇಳಿ ಬಂದಿದೆ.
ಕಚೇರಿಗೆ ಹೊರಗಡೆಯಿಂದ ಬೀಗ ಹಾಕಿ ಒಳಗಡೆ ಸೇರಿಕೊಂಡು ದಾಖಲೆಗಳ ತಿದ್ದುಪಡಿ ಮಾಡಿರುವ ಆರೋಪ ಶಾಸಕರ ವಿರುದ್ಧ ಕೇಳಿ ಬಂದಿತ್ತು. ಸದ್ಯ ಶಾಸಕರು ಸೇರಿ ಒಟ್ಟು ಆರು ಜನ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಅಭಿವೃದ್ಧಿ ಮರೆತು ಭೂ ಮಾಫಿಯಾ, ಭೂ ಕಬಳಿಕೆ, ರಿಯಲ್ ಎಸ್ಟೇಟ್ ದಂಧೆಯನ್ನೇ ಪೂರ್ಣ ಪ್ರಮಾಣದ ಕೆಲಸ ಮಾಡಿಕೊಂಡಿರುವ ಶಾಸಕರು, ಅಕ್ರಮದಲ್ಲಿ ತೊಡಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಾವುದೇ ಕೆಲಸವನ್ನು ಮಾಡಿಕೊಟ್ಟಿಲ್ಲ. ರಾಜಕಾಲುವೆ ಒಳಗೊಂಡಂತೆ 15 ಎಕರೆ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ. ತಮ್ಮದೇ ಬಡಾವಣೆಯ ನಿರ್ಮಾಣ ಮಾಡಿದ್ದಾರೆ. ಸರ್ಕಾರಿ ದಾಖಲೆಗಳನ್ನು ತಿರುಚಿ ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ ಎಂದು ಕೆಲ ದಾಖಲೆಗಳ ಸಮೇತ ಲೋಕಾಯುಕ್ತ ಕಚೇರಿಗೆ ಬಂದುಸಾಮಾಜಿಕ ಕಾರ್ಯಕರ್ತ ಜಗದೀಶ್ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಅವರು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.
ಶಾಸಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಡೆಪ್ಯುಟಿ ಕಮಿಷನರ್, ಅಸಿಸ್ಟೆಂಟ್ ಕಮಿಷನರ್, ಸರ್ವೆ ಸೆಟಲ್ಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಅಸಿಸ್ಟೆಂಟ್ ಡೈರೆಕ್ಟರ್, ದೇವನಹಳ್ಳಿ ತಾಲೂಕು ತಹಶೀಲ್ದಾರ್, ಸಬ್ ರಿಜಿಸ್ಟರ್, ಡೆಪ್ಯುಟಿ ತಹಶೀಲ್ದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.