ಬೆಂಗಳೂರು :ಯಾವುದೇ ಮಾಹಿತಿ ನೀಡದೆ ಆಪ್ತನನ್ನು ಬಂಧಿಸಿರುವುದಕ್ಕೆ ಹಾಗೂ ಸಿಸಿಬಿಗೆ ದೂರು ನೀಡಿದ್ದನ್ನೂ ಗಮನಕ್ಕೆ ತಾರದಿರುವುದಕ್ಕೆ ಬೇಸರಗೊಂಡಿರುವ ಸಚಿವ ಶ್ರೀರಾಮುಲುಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.
ಬೆಳಗ್ಗೆಯೇ ಶ್ರೀರಾಮುಲುಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಯಡಿಯೂರಪ್ಪ, ಘಟನೆ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ, ಬಂದು ಭೇಟಿಯಾಗಿ, ಎಲ್ಲವನ್ನೂ ಸರಿಪಡಿಸೋಣ ಎಂದು ಸೂಚಿಸಿದ್ದಾರೆ. ಯಡಿಯೂರಪ್ಪ ಸೂಚನೆ ಹಿನ್ನೆಲೆ ವಿಧಾನಸೌಧ ಕಚೇರಿ ಇಲ್ಲವೇ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಲಿದ್ದಾರೆ.
ಈಗಾಗಲೇ ಖಾತೆ ಬದಲಾವಣೆ, ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪಕ್ಕೆ ಆಗಾಗ ಬೇಸರ ವ್ಯಕ್ತಪಡಿಸಿದ್ದ ಶ್ರೀರಾಮುಲು, ಈಗ ತಮ್ಮ ಆಪ್ತನ ಬಂಧನ ವಿಚಾರದ ಕುರಿತು ಮುಂಚಿತವಾಗಿ ತಮಗೆ ಮಾಹಿತಿ ಕೊಟ್ಟಿರಲಿಲ್ಲ. ಸರ್ಕಾರದ ಭಾಗವಾಗಿರುವ ನನ್ನ ಸಹಾಯಕನನ್ನ ಮಾಹಿತಿ ನೀಡದೆ ಈ ರೀತಿ ಬಂಧನ ಪ್ರಕ್ರಿಯೆ ನಡೆಸಲಾಗಿದೆ ಎಂದು ರಾಮುಲು ಅಸಮಾಧಾನಗೊಂಡಿದ್ದಾರೆ. ಇದನ್ನು ತಿಳಿದ ಸಿಎಂ ಯಡಿಯೂರಪ್ಪ, ಶ್ರೀರಾಮುಲುಗೆ ಕರೆ ಮಾಡಿ ಬಂದು ಭೇಟಿಯಾಗಲು ಸೂಚನೆ ನೀಡಿದ್ದಾರೆ.
ಸಂಧಾನ ಸಾಧ್ಯತೆಯಿಂದ ಗೌಪ್ಯತೆ :ತಮ್ಮ ಹೆಸರು ಹೇಳಿಕೊಂಡು ಹಣ ಪಡೆದು ಜನರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಶ್ರೀರಾಮುಲುಗೆ ಮಾಹಿತಿ ನೀಡಿದ್ದರೆ ಪ್ರಕರಣ ಮುಚ್ಚಿಹೋಗುವ ಇಲ್ಲವೇ ಮಾತುಕತೆ ಮೂಲಕ ಬಗೆಹರಿಸುವ ಸಾಧ್ಯತೆ ಇತ್ತು. ಹಾಗಾಗಿ, ಬೇರೆ ಯಾರೂ ಕೂಡ ಮುಂದೆ ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಕಡಿವಾಣ ಹಾಕಲು ಈ ರೀತಿಯಲ್ಲಿ ವಿಜಯೇಂದ್ರ ದೂರು ನೀಡಿದ್ದರು. ಇದನ್ನು ಸಿಎಂ ಯಡಿಯೂರಪ್ಪ ಗಮನಕ್ಕೂ ತಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಶ್ರೀರಾಮುಲು ಪಿಎ ಬಂಧನ ವಿರೋಧಿಗಳಿಗೆ ಅಪಪ್ರಚಾರದ ಸರಕಾಗಲಿದೆ ; ಕಿಡಿ ಹೊತ್ತಿಸುತ್ತಾ ವಿಜಯೇಂದ್ರ ಟ್ವೀಟ್?