ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಮಾರ ಕೃಪಾ ಅತಿಥಿಗೃಹಕ್ಕೆ ಆಗಮಿಸಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದರು.
ಅರಮನೆ ಮೈದಾನದತ್ತ ಉಭಯ ನಾಯಕರು ತಮ್ಮ ನಿವಾಸ ಕಾವೇರಿಯಿಂದ ಹೊರಟು ಕುಮಾರ ಕೃಪಾ ಅತಿಥಿಗೃಹಕ್ಕೆ ಆಗಮಿಸಿದ ಸಿಎಂ, ಅರುಣ್ ಸಿಂಗ್ ಜೊತೆ ಚರ್ಚಿಸಿ ನಂತರ ಇಲ್ಲಿಂದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದರು.
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಚಿವ ಬಿಸಿ ಪಾಟೀಲ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ನಾಗೇಶ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇದೇ ಸಂದರ್ಭದಲ್ಲಿ ಇದ್ದರು. ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಬೇಸರಗೊಂಡಿರುವ ನಾಗೇಶ್ ಹಾಗೂ ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ಅವರು ತಮ್ಮ ದೂರು ಸಲ್ಲಿಕೆಗೆ ಕುಮಾರ ಕೃಪಾ ಅತಿಥಿಗೃಹಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿಎಂ ಕೂಡ ಆಗಮಿಸಿದರು. ನಂತರ ಅರಮನೆ ಮೈದಾನದತ್ತ ಪ್ರಯಾಣ ಬೆಳೆಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅರುಣ್ ಸಿಂಗ್ 15-20 ನಿಮಿಷ ಚರ್ಚೆ ನಡೆಸಿ ಅರಮನೆ ಮೈದಾನದತ್ತ ಸಿಎಂ ಆಗಮಿಸಿದ್ದ ವಾಹನದಲ್ಲಿಯೇ ಒಟ್ಟಾಗಿ ತೆರಳಿದ್ದಾರೆ. ಅಲ್ಲಿಂದ ನೇರವಾಗಿ 3 ಗಂಟೆಗೆ ರಾಜಭವನಕ್ಕೆ ಇವರು ತಲುಪಲಿದ್ದಾರೆ. ಅಲ್ಲಿ ಏಳು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವ ನಾಯಕರು ತಮ್ಮ ಅಸಮಾಧಾನವನ್ನು ವಿವಿಧ ಕಡೆ ವ್ಯಕ್ತಪಡಿಸುತ್ತಿದ್ದು ಸಂಜೆಯವರೆಗೂ ಅರುಣ್ ಸಿಂಗ್ ನಗರದಲ್ಲೇ ಇರಲಿದ್ದು ಇನ್ನಷ್ಟು ನಾಯಕರು ಅವರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆಯಿದೆ.