ಬೆಂಗಳೂರು : ಸಾರಿಗೆ ಸೇವೆಯಲ್ಲಿ ಶೇ.100ರ ಆಸನ ಭರ್ತಿಗೆ ಅವಕಾಶ ನೀಡಿರುವಂತೆ ಸಿನಿಮಾ ಮಂದಿರಗಳಲ್ಲಿಯೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಶಾಸಕರ ಜೊತೆ ಸಮಾಲೋಚನೆ ವೇಳೆ ಸಿಎಂ ಈ ರೀತಿಯ ಭರವಸೆ ನೀಡಿದ್ದಾರೆ.
ಓದಿ : ಯತ್ನಾಳ್ ಎಲ್ಲೆ ಮೀರುತ್ತಿದ್ದರೂ ಮೌನವಾಗಿದ್ದೇಕೆ: ಸಚಿವರ ನಡೆಗೆ ರೇಣುಕಾಚಾರ್ಯ ಆಕ್ಷೇಪ
ಸಿನಿಮಾ ಥಿಯೇಟರ್, ಪಿವಿಆರ್ಗಳಲ್ಲಿ ಶೇ.100ರಷ್ಟು ರಿಲ್ಯಾಕ್ಸೇಶನ್ ಕೊಡಬೇಕು. ತಮಿಳುನಾಡಿನ ಮಾದರಿಯಲ್ಲಿ ರಿಲ್ಯಾಕ್ಸೇಶನ್ ಕೊಡಿ, ಪ್ರೇಕ್ಷಕರ ಸಂಖ್ಯೆ ಶೇ.50 ಇರುವುದನ್ನು ಶೇ.100 ಕ್ಕೆ ಹೆಚ್ಚಳ ಮಾಡಿ ಎಂದು ಶಾಸಕರ ಸಭೆಯಲ್ಲಿ ಮಲೆನಾಡು ಭಾಗದ ಶಾಸಕರೊಬ್ಬರು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಿಎಂ, ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದರು.
ನಂತರ ಆಯಾ ಶಾಸಕರು ಸ್ಥಳೀಯ ಸಮಸ್ಯೆಗಳು, ಮಲೆನಾಡು ಭಾಗದ ಸಾಮಾನ್ಯ ಸಮಸ್ಯೆಗಳು, ಕಸ್ತೂರಿ ರಂಗನ್ ವರದಿಯಿಂದ ಆಗುವ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದರು.