ಕರ್ನಾಟಕ

karnataka

ETV Bharat / state

CM Siddaramaiah: ಸಿಎಂ ಭೇಟಿಯಾದ ಅಶೋಕ್‌ ಚೌಹಾಣ್; ಅಭಿನಂದನೆ, ಮಹಾರಾಷ್ಟ್ರ ಚುನಾವಣೆ ಕುರಿತು ಚರ್ಚೆ

ನಿನ್ನೆ ಡಿಸಿಎಂ ಡಿ ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿ ಅಶೋಕ್ ಚೌಹಾಣ್ ಅಭಿನಂದನೆ ಸಲ್ಲಿಸಿದ್ದರು.

Ashok Chauhan met CM Siddaramaih
ಸಿಎಂ ಭೇಟಿಯಾದ ಅಶೋಕ್‌ ಚೌಹಾಣ್

By

Published : Jun 26, 2023, 12:45 PM IST

ಬೆಂಗಳೂರು: ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ಹಲವು ರಾಜ್ಯದ ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ. ನಿನ್ನೆಯೇ ಬೆಂಗಳೂರಿಗೆ ಅಗಮಿಸಿರುವ ಚೌಹಾಣ್‌ ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ನಿನ್ನೆ ಸಂಜೆ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದರು. ನಿನ್ನೆ ಸಂಜೆ ಅಶೋಕ್ ಚೌಹಾಣ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಈ ಸಂದರ್ಭ ಮಹಾರಾಷ್ಟ್ರದಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆ ಹಾಗೂ ಪಕ್ಷದ ಬಲದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿರುವ ಹಿಂದೆ ಇರುವ ರಾಜ್ಯ ನಾಯಕರ ಪ್ರಯತ್ನ, ಹೋರಾಟ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಜನವಿರೋಧಿ ಅಲೆಯನ್ನು ಬಳಸಿಕೊಂಡ ವಿಧಾನದ ಕುರಿತು ಚರ್ಚಿಸಿದ್ದರು.

ಇಂದಿನ ಭೇಟಿ ಸಂದರ್ಭದಲ್ಲಿಯೂ ಚೌಹಾಣ್ ಹಾಗೂ ಸಿದ್ದರಾಮಯ್ಯ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಎರಡನೇ ಬಾರಿಗೆ ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ. ಹಣಕಾಸು ಸಚಿವರೂ ಆಗಿರುವ ಅವರು ಸದ್ಯ ಬಜೆಟ್‌ ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಆರ್ಥಿಕ ಸಚಿವರಾಗಿ 14ನೇ ಬಜೆಟ್‌ ಮಂಡನೆಗೆ ಸಜ್ಜಾಗುತ್ತಿರುವ ಸಿದ್ದರಾಮಯ್ಯ ಜತೆ ಚೌಹಾಣ್‌ ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದು ಭಾಗ್ಯಗಳಿಗೆ ಹಣ ಹೊಂದಿಸುವ ಜತೆ ಇತರೆ ಘೋಷಣೆಯನ್ನೂ ಈಡೇರಿಸಲು ಕೈಗೊಂಡಿರುವ ಕಾರ್ಯತಂತ್ರ ಕುರಿತು ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಮಹಾರಾಷ್ಟ್ರ ಚುನಾವಣೆಯಲ್ಲೂ ಇಂತಹ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸಾಧಕ, ಬಾಧಕಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ಸಿಎಂ ಭೇಟಿಯಾದ ಅಶೋಕ್‌ ಚೌಹಾಣ್

ಚುನಾವಣೆ ಮುನ್ನವೇ ಹೇಳಿದ್ದರು:ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನವೇ ಕರ್ನಾಟಕಕ್ಕೆ ಆಗಮಿಸಿ ಬೆಳಗಾವಿಯಲ್ಲಿ ಪಕ್ಷದ ಪರ ಮಾಧ್ಯಮಗೋಷ್ಟಿ ನಡೆಸಿದ್ದ ಅಶೋಕ್‌ ಚೌಹಾಣ್, ರಾಜ್ಯದಲ್ಲಿ ಕಾಂಗ್ರೆಸ್ ಪರ ಸುನಾಮಿ ಎದ್ದಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಈ ಬಾರಿ ಐದು ಪ್ರಮುಖ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಉಚಿತ ವಿದ್ಯುತ್, ಗೃಹ ಲಕ್ಷ್ಮೀ, ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗೆ ಭತ್ಯೆ ಸೇರಿದಂತೆ ಸಾಕಷ್ಟು ಯೋಜನೆಯನ್ನು ಘೋಷಣೆ ಮಾಡಿದೆ. ಇದನ್ನು ಇಂತಿಷ್ಟು ಕಾಲದಲ್ಲಿ ಪೂರ್ಣಗೊಳಿಸುವ ಬಗ್ಗೆ ಕಾಂಗ್ರೆಸ್​ ಭರವಸೆ ನೀಡಿದ್ದು, ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇರಿಸಿದ್ದಾರೆ. ಆದರೆ ಬಿಜೆಪಿ ಇದರ ವಿರುದ್ಧವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಸುನಾಮಿ ಎದ್ದಿದೆ ಎಂದು ಹೇಳಿದ್ದರು. ಅದೇ ರೀತಿ ನಿರೀಕ್ಷೆಗೂ ಮೀರಿದ 135 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿನ ಕಾಂಗ್ರೆಸ್‌ ನಾಯಕರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ:ಭಾನುವಾರವೂ ಡಿಸಿಎಂ ಬ್ಯುಸಿ : ವಿವಿಧ ಗಣ್ಯರ ಭೇಟಿ, ಮಾತುಕತೆ

ABOUT THE AUTHOR

...view details