ಕರ್ನಾಟಕ

karnataka

ETV Bharat / state

CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು - ಕರ್ನಾಟಕ ಕಾಂಗ್ರೆಸ್ ಸರ್ಕಾರ

CM Siddaramaiah's advice to his MLA's: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಿಗೆ ಹಲವು ಸಲಹೆಗಳನ್ನು ನೀಡಿದರು. ಶಾಸಕರ ಪತ್ರದ ಬಗ್ಗೆಯೂ ಪ್ರಸ್ತಾಪವಾಯಿತು.

Congress Legislative Party Meeting
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

By

Published : Jul 28, 2023, 7:21 AM IST

Updated : Jul 28, 2023, 9:03 AM IST

ಬೆಂಗಳೂರು: ಪ್ರತಿಪಕ್ಷಗಳು ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಮಾತುಗಳ ಮೇಲೆ ವಿಶೇಷ ಗಮನ ಹರಿಸುತ್ತಿವೆ. ನಮ್ಮ ಹಲವು ಯೋಜನೆಗಳು ಸಂಪೂರ್ಣವಾಗಿ ಜನರನ್ನು ತಲುಪಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಮ್ಮ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. 135 ಶಾಸಕರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಹಾಗೂ ಒಂದಿಷ್ಟು ವರ್ಷಗಳ ಅಂತರದ ಬಳಿಕ ಆಗಮಿಸಿದ್ದೀರಿ. ಆದ್ದರಿಂದ ಮಾತನಾಡುವಾಗ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡುವಾಗ ನಿಗಾ ವಹಿಸಿ. ಹಗುರವಾಗಿ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಪ್ರಾರಂಭದಲ್ಲಿಯೇ ಅವರು ಮಾತನಾಡಿದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರವನ್ನು ಡಿಸ್ಟರ್ಬ್ ಮಾಡುವ ಪ್ರಯತ್ನ ನಡೆಯುತ್ತೆ. ಇದರ ಬಗ್ಗೆ ನಿಮ್ಮ ಕಣ್ಣು, ಕಿವಿ ಚುರುಕಿರಬೇಕು. ನಿಮ್ಮನ್ನು ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ. ಸರ್ಕಾರ ಬಂದು ಈಗ ಎರಡು ತಿಂಗಳಾಗಿದೆ. ಆಗಲೇ ಕೆಲವು ಸಂದರ್ಭಗಳು ಶುರುವಾಗಿವೆ. ನೀವು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಈ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮಧ್ಯಪ್ರವೇಶಿಸಿ, ನಮಗೆ ಎಲ್ಲೂ ಅಸಮಾಧಾನವಿಲ್ಲ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ. ನಾವು ಎಲ್ಲವೂ ಇಲ್ಲವೆಂದು ಹೇಳ್ತಿಲ್ಲ. ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇದಷ್ಟೇ ನಾವು ಕೇಳಿದ್ದು. ನಾವು ಬೇರೆ ಉದ್ದೇಶ ಇಟ್ಕೊಂಡು ಪತ್ರ ಬರೆದಿದ್ದಲ್ಲ. ಪಕ್ಷ ವಿರೋಧಿ, ಸರ್ಕಾರದ ವಿರೋಧಿ ನಡೆಯೂ ಇಲ್ಲ. ನಾವು ಬರೆದಿರುವ ಪತ್ರವೇ ಬೇರೆ ಮಾಧ್ಯಮದಲ್ಲಿ ಬರುತ್ತಿರುವ ಪತ್ರವೇ ಬೇರೆ ಎಂದು ಸ್ಪಷ್ಟನೆ ನೀಡಿದರು.

ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಜೊತೆ ಕುಂದು ಕೊರತೆ ಸಭೆ:ನಮ್ಮ ಗ್ಯಾರಂಟಿ ಯೋಜನೆಗಳನ್ನು ನಮ್ಮ ನಾಡಿನ ಶೇ.97ರಷ್ಟು ಜನ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಸಮಾಧಾನಪಟ್ಟಿದ್ದಾರೆ. ಎಲ್ಲ ಜಾತಿ, ಧರ್ಮ, ವರ್ಗಗಳಿಗೂ ಈ ಯೋಜನೆಗಳು ತಲುಪಿವೆ. ಇದು ಬಿಜೆಪಿ ಪರಿವಾರಕ್ಕೆ ನಡುಕ ಹುಟ್ಟಿಸಿದೆ. ಹೀಗಾಗಿ ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ, ಸುದ್ದಿ ಮಾಡಿಸಿದ್ದಾರೆ. ಆಡಳಿತಾತ್ಮಕ ಒತ್ತಡಗಳ ನಡುವೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆದು, ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ಸಿಎಂ ಸಿದ್ದರಾಮಯ್ಯ ತಿಳಿ ಹೇಳಿದರು

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

'ನಮ್ಮ ಐದು ಗ್ಯಾರಂಟಿಗಳಿಗೆ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳೂ ಸ್ಪಂದಿಸಿವೆ':ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪರಿವಾರದ ಮೂಲಕ ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದು ಸಿಎಂ ಶಾಸಕರಿಗೆ ತಿಳಿಸಿದರು.

ಹೊಸ ಸರ್ಕಾರ ಬಂದ ಬಳಿಕ ನಮ್ಮ ಎದುರಿಗೆ ತಕ್ಷಣಕ್ಕೆ ರಾಜ್ಯದ ಆರ್ಥಿಕತೆಯನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇತ್ತು. ಆಯವ್ಯಯ ರೂಪಿಸುವ ಹೊಣೆಗಾರಿಕೆಯೂ ಇತ್ತು. ಹೊಸ ಜಂಟಿ ಅಧಿವೇಶನವನ್ನೂ ಕರೆಯಬೇಕಿತ್ತು. ಹೊಸ ಶಾಸಕರಿಗೂ ತಮ್ಮ ಅಭಿಪ್ರಾಯ, ನಿಲುವನ್ನು ವ್ಯಕ್ತಪಡಿಸಲು ಅವಕಾಶ ಆಗಬೇಕು ಎನ್ನುವ ಕಾರಣದಿಂದ ಮೂರು ವಾರ ಮೊದಲ ಅಧಿವೇಶನ ನಡೆಸಿದೆವು ಎಂದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಈ ಆಯವ್ಯಯ ಅತ್ಯಂತ ಮಹತ್ವದ್ದಾಗಿತ್ತು. ಐದು ಗ್ಯಾರಂಟಿಗಳನ್ನು ಜಾರಿ ಮಾಡಲು 58 ಸಾವಿರ ಕೋಟಿ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ಹೀಗಾಗಿ ಈ ಆಯವ್ಯಯವನ್ನು ಅತ್ಯಂತ ಎಚ್ಚರಿಕೆಯಿಂದ ರೂಪಿಸಲು ಹಾಗೂ ಐದು ಗ್ಯಾರಂಟಿಗಳಿಗೆ ಹಣ ಮೀಸಲಿಡುವ ಅಗತ್ಯವೂ ಇತ್ತು. ಆದ್ದರಿಂದ ನಾನೇ ಸ್ವತಃ ಬಜೆಟ್ ಸಿದ್ಧತೆಗೆ ಕೂರುವುದು ಅನಿವಾರ್ಯವಾಗಿತ್ತು. ಈ ಎಲ್ಲ ಕಾರಣಗಳಿಂದ ನಾನು ಇತರೆ ಸಂಗತಿಗಳ ಕಡೆಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಅಧಿವೇಶನದ ನಡುವೆ ರಾಷ್ಟ್ರ ಮಟ್ಟದ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ನಡೆಸಿದೆವು. ಈ ಸಭೆ ಮುಗಿಯುತ್ತಿದ್ದಂತೆ ನಮ್ಮ ವರಿಷ್ಠರು ಶಾಸಕರು ಮತ್ತು ಸಚಿವರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದರು. ಈ ಎರಡೂ ಕಾರಣಗಳಿಂದ ಶಾಸಕಾಂಗ ಸಭೆ ಕರೆಯುವುದು ತಡವಾಗಿದೆ ಎಂದರು.

ಇದನ್ನೂ ಓದಿ: ನಂದಿನಿ ಹಾಲು ದರ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ: ಶಾಸಕರ ಅಸಮಾಧಾನದ ಬಗ್ಗೆಯೂ ಚರ್ಚೆ

Last Updated : Jul 28, 2023, 9:03 AM IST

ABOUT THE AUTHOR

...view details