ಬೆಂಗಳೂರು:ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಜಾರಿ ಅಸಾಧ್ಯ, ಅನುಷ್ಠಾನವಾದಲ್ಲಿ ರಾಜ್ಯ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹೇಳಿದಂತೆ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೊದಲ ಅರ್ಜಿಯನ್ನು ವಿದ್ಯಾರ್ಥಿನಿಯೊಬ್ಬರಿಗೆ ಹಸ್ತಾಂತರಿಸಿ ಬಳಿಕ ಮಾತನಾಡಿದ ಸಿಎಂ, ನಮ್ಮ ಐದನೇ ಗ್ಯಾರಂಟಿ ಯುವನಿಧಿ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
ಚುನಾವಣಾ ಪೂರ್ವದಲ್ಲಿ ನಾವು ಭರವಸೆ ಕೊಟ್ಟಾಗ ಪ್ರಧಾನಿ ಮೋದಿ ಈ ಗ್ಯಾರಂಟಿ ಜಾರಿ ಮಾಡಲಾಗಲ್ಲ. ಒಂದು ವೇಳೆ ಮಾಡಿದರೆ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು. 12 ವರ್ಷ ಸಿಎಂ 10 ವರ್ಷ ಪಿಎಂ ಆಗಿದ್ದವರು ಇದನ್ನು ಹೇಳಿದ್ದರು. ಆದರೆ, ನಮ್ಮ ರಾಜ್ಯ ದಿವಾಳಿಯಾಗಿಲ್ಲ. ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ಕರ್ನಾಟಕ ಇನ್ನೂ ಸದೃಢವಾಗಿದೆ ಎಂದು ಟಾಂಗ್ ನೀಡಿದರು.
ಯುವನಿಧಿಗೆ 250 ಕೋಟಿ ಬೇಕು:ಉಚಿತ ಯೋಜನೆ ಕೊಡಬಾರದು ಎಂದು ಹೇಳುವ ಮೋದಿಯವರೇ ಈಗ ಹಲವು ರಾಜ್ಯಗಳಲ್ಲಿ ಉಚಿತ ಯೋಜನೆ ಘೋಷಿಸುತ್ತಿದ್ದಾರೆ. 39 ಸಾವಿರ ಕೋಟಿ ರೂ. ನಮ್ಮ ಮೊದಲ ವರ್ಷದಲ್ಲಿ ಉಚಿತ ಯೋಜನೆಗೆ ವೆಚ್ಚವಾಗಲಿದೆ. ಅಷ್ಟನ್ನೂ ನಾವು ಬಜೆಟ್ನಲ್ಲಿಯೇ ಒದಗಿಸಿದ್ದೇವೆ. 250 ಕೋಟಿ ಯೋಜನೆ ಯುವನಿಧಿಗೆ ಬೇಕು. 5.29 ಲಕ್ಷ ಪದವೀಧರ, ಡಿಪ್ಲೊಮಾ ಮಾಡಿದವರಿದ್ದಾರೆ. ಇವರಲ್ಲಿ 4.21 ಲಕ್ಷ ಪದವೀಧರ 48 ಸಾವಿರ ಡಿಪ್ಲೊಮಾ ಮಾಡಿದವರು ಇದ್ದಾರೆ. ಇಷ್ಟೂ ಜನಕ್ಕೆ ನಾವು ನಿರುದ್ಯೋಗ ಭತ್ಯೆ ಕೊಡಲಿದ್ದೇವೆ ಎಂದರು.
ಪ್ರಧಾನಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ, ಇದ್ಯಾವುದೂ ಆಗಲಿಲ್ಲ. ಸರ್ಕಾರ ಮಾತು ತಪ್ಪಿದೆ. ನಮ್ಮ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಇದೇ ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ ಎಂದರು.