ಬೆಂಗಳೂರು: ನಟ ಸುದೀಪ್ ಬಿಜೆಪಿ ಸೇರ್ಪಡೆ ಕುರಿತ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿರುವುದು ನಿಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಗುಟ್ಟುಬಿಟ್ಟುಕೊಡದೇ ಹಾರಿಕೆಯ ಉತ್ತರ ನೀಡಿದರು. ಪಕ್ಷದಲ್ಲಿ ಚರ್ಚೆಯಾಗುತ್ತಿರುವುದು ನಿಜ, ಕೇವಲ ಚರ್ಚೆಯಾಗುತ್ತಿದೆ ಅಷ್ಟೆ. ಹೆಚ್ಚಿನ ವಿಷಯಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇನೆ ಎಂದು ಸುದೀಪ್ ವಿಷಯದ ಚರ್ಚೆಗೆ ತೆರೆ ಎಳೆದರು.
ಐಟಿ, ಇಡಿ ಮೂಲಕ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಪ್ರೋಟೋಕಾಲ್ ಪ್ರಕಾರ ಎಲ್ಲ ನಡೆಯುತ್ತಿದೆ. ಒಂದು ವಾರದಿಂದಲ್ಲೇ ಎಲ್ಲ ಅಧಿಕಾರಿಗಳು ಬಂದಿದ್ದಾರೆ. ಇವರಿಗೇಕೆ ಭಯ. 60 ವರ್ಷದಿಂದ ದುಡ್ಡು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಗಿಲ್ಟಿ ಫೀಲ್ ಆಗುತ್ತಿದೆ ಎಂದರು ಚಾಟಿ ಬೀಸಿದರು.
ಸಿಎಂ ಅವರಿಂದ ಎರಡು ಸುದ್ದಿಗೋಷ್ಠಿ:ನಟ ಸುದೀಪ್ ಬಿಜೆಪಿ ಸೇರ್ಪಡೆ ಸುದ್ದಿ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಸುದ್ದಿಗೋಷ್ಠಿಗಳನ್ನು ಕರೆದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನ 1.30ಕ್ಕೆ ಕುಮಾರಪಾರ್ಕ್ ನಲ್ಲಿರುವ ಅಶೋಕ ಹೋಟೆಲ್ನಲ್ಲಿ ಮೊದಲ ಸುದ್ದಿಗೋಷ್ಠಿ ಕರೆದಿರುವ ಸಿಎಂ ಬೊಮ್ಮಾಯಿ, 2.30ಕ್ಕೆ ಕ್ಯಾಪಿಟಲ್ ಹೋಟೆಲ್ನಲ್ಲಿ ಎರಡನೇ ಸುದ್ದಿಗೋಷ್ಠಿ ಕರೆದಿದ್ದಾರೆ. ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಎರಡು ಸುದ್ದಿಗೋಷ್ಠಿ ಕರೆದಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.