ಕರ್ನಾಟಕ

karnataka

ETV Bharat / state

ಮುಂದೆ ಮಾಸಾಶನಕ್ಕೂ ಹಣ ಇರಲ್ಲ, ಇದು ಅಭಿವೃದ್ಧಿ ವಿರೋಧಿ ಬಜೆಟ್; ಸಿದ್ದರಾಮಯ್ಯ

ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಅಭಿವೃದ್ಧಿಗೆ ಹಣವೇ ಇಲ್ಲದ ಮೇಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಬಾರಿಯ ಬಜೆಟ್ ಹಣದ ಕೊರತೆಯಿಂದ, ಸಾಲದ ಹೊರೆಯಿಂದ ಮಗುಚಿ ಬಿದ್ದಿದೆ ಎಂದು ಟೀಕಿಸಿದರು.

Opposition leader Siddaramaiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Mar 15, 2021, 3:41 PM IST

Updated : Mar 15, 2021, 4:12 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಈ ಸಾಲಿನ ಬಜೆಟ್ ರಾಜ್ಯದ ಇತಿಹಾಸ ಕಂಡರಿಯದ ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ.

ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ಧಿಗೆ ಹಣವೇ ಇಲ್ಲದ ಮೇಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಬಾರಿಯ ಬಜೆಟ್ ಹಣದ ಕೊರತೆಯಿಂದ, ಸಾಲದ ಹೊರೆಯಿಂದ ಮಗುಚಿ ಬಿದ್ದಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ನಡೆಯುತ್ತಿರುವ ರೀತಿ ನೋಡಿದರೆ ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ದಿ ಕಾರ್ಯಗಳಿಗಿರಲಿ, ವಿಧವೆಯರು, ವೃದ್ಧರು, ಅಂಗವಿಕಲರಿಗೆ ಮಾಸಾಶನ ಕೊಡಲೂ ಸರ್ಕಾರದಲ್ಲಿ ಹಣ ಇರುವುದಿಲ್ಲ ಎಂದರು.

ಕಳೆದ ಬಾರಿ ಬಜೆಟ್ ಮಂಡಿಸುವಾಗ 143 ಕೋಟಿ ರೂ. ಹೆಚ್ಚುವರಿ ಆದಾಯದ ಬಜೆಟ್ ಎಂದು ಬಣ್ಣಿಸಿದಿರಿ. ಆದರೆ 19 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ‌ ಕೊರತೆಯಾಯಿತು. ಇದರ ಪರಿಣಾಮವಾಗಿ 2021-2022ನೇ ಸಾಲಿನ ಬಜೆಟ್ ಮಂಡಿಸುವಾಗ 15 ಸಾವಿರ ಕೋಟಿ ರೂ.ಗಳ ಕೊರತೆ ಆಗುತ್ತದೆ ಎಂದಿದ್ದೀರಿ. ಇತಿಹಾಸದಲ್ಲಿ ಹಿಂದೆಂದೂ ಈ ಗಾತ್ರದ ಕೊರತೆಯನ್ನು ಬಜೆಟ್ ಕಂಡಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

2020-21ನೇ ಸಾಲಿನಲ್ಲಿ ಈಗಾಗಲೇ 70 ಸಾವಿರ ಕೋಟಿ ರೂ. ಸಾಲ ಪಡೆದಿದ್ದೀರಿ. ಫೆಬ್ರವರಿ, ಮಾರ್ಚ್ ತಿಂಗಳು ಸೇರಿದರೆ ಈ ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನು 2021-22 ನೇ ಸಾಲಿನಲ್ಲಿ 71 ಸಾವಿರ ಕೋಟಿ ರೂ.ಸಾಲ ಪಡೆಯುವುದಾಗಿ ಹೇಳಿದ್ದೀರಿ. ಅಲ್ಲಿಗೆ‌ ನಿಮ್ಮ ಸಾಲ ಒಂದೇ ಸಮನೆ ಏರುಗತಿಯಲ್ಲಿದೆ. ಹೀಗೆ ಪಡೆದ ಸಾಲವನ್ನು ಬಜೆಟ್ ಕೊರತೆ ತುಂಬಲು ಬಳಸುವುದು ಉತ್ತಮ ಆರ್ಥಿಕತೆಯ ಲಕ್ಷಣವಲ್ಲ. ಸಾಲದ ಹಣವನ್ನು ಆಸ್ತಿ ನಿರ್ಮಾಣ ಮಾಡಲು ಬಳಸಬೇಕು, ಸಾಲ ತೀರಿಸಲು ಅಲ್ಲ ಎಂದರು.

ಈ ಮುನ್ನ ಜಿಡಿಪಿಯ ಶೇ 25 ರ ವ್ಯಾಪ್ತಿಯಲ್ಲಿರುವಂತೆ ಸಾಲ ಮಾಡಬಹುದಿತ್ತು. ಆದರೆ ಅದೀಗ 26.9 ಕ್ಕೇರಿದೆ. ಕೇಂದ್ರ ಸರ್ಕಾರ ನಿಮಗೆ 27 ರಷ್ಟು ಸಾಲ ಪಡೆಯಲು ಅನುಮತಿ ನೀಡಿದೆಯೇನೋ ನಿಜ. ಆದರೆ ಆಗಿರುವ ಹೊರೆಯನ್ನು ಹೊತ್ತರೆ ಆಗುವ ಪರಿಣಾಮ ಆಗುತ್ತದೆ ಎಂದು ಹೇಳಿದರು. ಇವತ್ತಿನ ಸ್ಥಿತಿಯಲ್ಲಿ ಸರ್ಕಾರದ ಅನಗತ್ಯ ಇಲಾಖೆಗಳನ್ನು ವಿಲೀನಗೊಳಿಸಿ, ಹೆಚ್ಚುವರಿ ನೌಕರರನ್ನು‌ ಕಿತ್ತು ಹಾಕಿ ಎಂದರು.

ಪ್ರತಿಭಟಿಸಿದ ವಿಪಕ್ಷ ಸದಸ್ಯರು:ಒಂದು ಹಂತದಲ್ಲಿ ಮೇಲೆದ್ದು ನಿಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಜೆಟ್​ನ‌ ಪರಿಸ್ಥಿತಿಗೆ ಕಾರಣವೇನು ಎಂದು ಹೇಳಲು ಪ್ರಯತ್ನಿಸಿದಾಗ ಪ್ರತಿಪಕ್ಷದ ಸದಸ್ಯರು ಅದನ್ನು ಪ್ರತಿಭಟಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಜೆಟ್​ನಲ್ಲಿ ಘೋಷಿಸಿದ ಯಾವ ಯೋಜನೆಗಳನ್ನೂ‌ ಕಡಿತ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡರು. ಅದರೆ ಪ್ರತಿಪಕ್ಷದ ಸದಸ್ಯರು, ಸಾಲ ಮಾಡಿ ಅಭಿವೃದ್ಧಿ ಮಾಡುತ್ತೀರಿ ಎಂದು ವ್ಯಂಗ್ಯವಾಡಿದರು. ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ, ಆಸ್ತಿ ನಿರ್ಮಾಣ ಮಾಡದೆ ಸಾಲ ತಂದು ಕೆಲಸ ಮಾಡಿದರೆ ಹೇಗೆ ರಾಜ್ಯದ ಅಭಿವೃದ್ದಿಯಾಗುತ್ತದೆ ಎಂದು ಪ್ರಶ್ನಿಸಿದರು. ಜನರ ಕೊಂಡುಕೊಳ್ಳುವಿಕೆ ಶಕ್ತಿ ಹೆಚ್ಚಾಗದೆ ಅಭಿವೃದ್ದಿಯಾಗಲು ಸಾಧ್ಯವೇ ಇಲ್ಲ ಎಂದರು.

ಓದಿ:ಪಂಚಮಸಾಲಿ ಹೋರಾಟ ಅಂತ್ಯ?: 6 ತಿಂಗಳು ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದ್ದೇಕೆ ಯತ್ನಾಳ್​?

ಇದೇ ಕಾರಣಕ್ಕಾಗಿ ಕೊರೊನಾ ಕಾಲದಲ್ಲಿ ರೈತರು ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ಒಂದು ಕೋಟಿ ಜನರಿಗೆ ತಲಾ 10 ಸಾವಿರ ರೂ. ನೆರವು ನೀಡಿ ಎಂದಿದ್ದೆ. ಹಾಗೆ ಹಣ ನೀಡಿದ್ದರೆ ಜನ ಅಂಗಡಿಗಳಿಗೆ ಹೋಗುತ್ತಿದ್ದರು, ಖರೀದಿ ಮಾಡುತ್ತಿದ್ದರು. ಆದರೆ ನೀವು ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು. ನೀವೇ ಕೆಲವರಿಗೆ ಐದೈದು ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದಿರಿ, ಆದರೆ ಕೊಡಲಿಲ್ಲ, ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರೆ ಸರ್ಕಾರಕ್ಕೆ ಹೇಗೆ ಆದಾಯ ಬರುತ್ತದೆ ಎಂದು ಪ್ರಶ್ನಿಸಿದರು. ಕೊರೊನಾ ಬಂದು ಜಗತ್ತಿನ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬಿದ್ದಿದೆ. ಆದರೆ ಅದೊಂದರಿಂದಲೇ ಸಮಸ್ಯೆ ಆಗಿಲ್ಲ ಎಂದರು.

ನೀವು ಹಲವು ಕ್ರಮಗಳ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಿತ್ತು. ಕೇಂದ್ರದಿಂದ ನಮಗೆ ಬರಬೇಕಾದ ಹಣ ಬಂದಿಲ್ಲ. ಹೋಗಿ ಕೇಂದ್ರದ ಮುಂದೆ ನಮಗೆ ಹಣ ಬೇಕು ಎಂದು ಪಟ್ಟು ಹಿಡಿಯಬಹುದಿತ್ತು. ಆದರೆ ಇಪ್ಪತ್ತೈದು ಸಂಸದರಿದ್ದೀರಲ್ಲ ಬಿಜೆಪಿಯವರು ಯಾಕೆ ಹೋಗಿ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಕೊರೊನಾ ಆತಂಕ: ಮತ್ತೆ ಕೊರೊನಾ ಉಲ್ಬಣ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೋವಿಡ್ ಮತ್ತೆ ಈಗ ಹೆಚ್ಚಾಗ್ತಿದೆ. ಇದು ಆತಂಕ, ಭಯ ತಂದಿದೆ. ಕೊರೊನಾ ತಡೆಗೆ ನಿಷ್ಠುರ ಕ್ರಮ ತಗೊಳ್ಳಿ. ಕ್ರಮ ಕೈಗೊಳ್ಳದಿದ್ದರೆ ಮತ್ತೆ ಲಾಕ್​ಡೌನ್ ಮಾಡಬೇಕಾಗುತ್ತದೆ. ಲಾಕ್​ಡೌನ್ ಮಾಡಿದರೆ ಬಹಳ ಕಷ್ಟವಾಗುತ್ತದೆ. ಜನ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸಬೇಕು. ಸರ್ಕಾರ ಕೆಲವು ಕ್ರಮ ತೆಗೆದುಕೊಂಡಿದೆ‌. ಅದು ಕಟ್ಟುನಿಟ್ಟಿನಲ್ಲಿ ಜಾರಿ ಆಗಲಿ ಎಂದು ಸಲಹೆ ನೀಡಿದರು.

Last Updated : Mar 15, 2021, 4:12 PM IST

ABOUT THE AUTHOR

...view details