ಯಲಹಂಕ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ಶತಸಿದ್ದ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ಶತಸಿದ್ಧ: ಎಸ್.ಆರ್ ವಿಶ್ವನಾಥ್
ಯಲಹಂಕ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಕುರಿತು ವಿವಾದಗಳು ಭುಗಿಲೆದ್ದಿರುವ ನಡುವೆಯೇ ಟ್ವೀಟ್ ಮಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್ ವಿಶ್ವನಾಥ್, ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ಶತಸಿದ್ದ ಎಂದಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, "ಯಲಹಂಕದ ವೀರ ಸಾವರ್ಕರ್ ಫ್ಲೈಓವರ್" ಉದ್ಘಾಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಯಾವುದೇ ಟೀಕೆ ಟಿಪ್ಪಣಿಗಳಿಗು ಕಿವಿಗೊಡಬೇಡಿ. ವೀರ ಸಾವರ್ಕರ್ ಹೆಸರು ಶತಸಿದ್ಧ ಕೇವಲ ಉದ್ಘಾಟನೆಯಷ್ಟೇ ಮುಂದೂಡಲಾಗಿದೆ, ಜನತೆ ಸಹಕರಿಸಬೇಕಾಗಿ ವಿನಂತಿ ಎಂದಿದ್ದಾರೆ.
ಸಾವರ್ಕರ್ ಜನ್ಮದಿನದ ಅಂಗವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮದರ್ ಡೈರಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಫ್ಲೈಓವರ್ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಇದಕ್ಕೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರ ಹೆಸರನ್ನಿಡುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಸರ್ಕಾರ ಸಾರ್ವಕರ್ ಹೆಸರಿಡುವ ನಿರ್ಧಾರವನ್ನು ಕೈಬಿಟ್ಟಿದೆ ಎಂಬ ಸುದ್ದಿಗಳು ಹರಿದಾಡಿದ್ದವು.