ಬೆಂಗಳೂರು: ಸರ್ಕಾರ ಕೇವಲ ವಿವಾದಗಳ ಸೃಷ್ಟಿಗೆ ಸೀಮಿತವಾಗಿದೆ. ಇಷ್ಟು ಮಾಡಿದ್ರೂ ಸಕ್ಸಸ್ ಆಗ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆರೋಪಿಸಿದರು.
ಹಿಜಾಬ್-ಕೇಸರಿ ಶಾಲು ವಿವಾದದ ಬಗ್ಗೆ ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿರುವುದು.. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋಹತ್ಯೆ ಕಾಯ್ದೆ ತಂದರೂ ಯಶ ಆಗ್ಲಿಲ್ಲ. ಮತಾಂತರ ನಿಷೇಧ ತಂದರೂ ಇನ್ನೂ ಕುಂಟುತ್ತಿದೆ. ಈಗ ಹಿಜಾಬ್ ವಿಚಾರ ಮುಂದೆ ತಂದಿದ್ದಾರೆ. ಮೈಸೂರು ಮಹಾರಾಜರ ಕಾಲದಲ್ಲೂ ಜಟಕಾ ಗಾಡಿಗಳಲ್ಲಿ ಹೋಗುವಾಗ ಪರದೆ ಇರುತ್ತಿತ್ತು. ಟಿಪ್ಪು ನಂತರ ಬಂದ ಮಹಾರಾಜರು ಹೆಣ್ಣು ಮಕ್ಕಳು ಹೋಗುವ ಗಾಡಿಗೆ ಪರದೆ ಹಾಕುತ್ತಿದ್ದರು.
ಈಗ ವಿರೋಧ ಮಾಡೋದಕ್ಕೆ ಹೊರಟಿದ್ದಾರೆ. ಮಾರ್ವಾಡಿ ಹೆಂಗಸರು ಸೆರಗು ಹಾಕ್ತಾರೆ. ಉತ್ತರಕರ್ನಾಟಕದಲ್ಲಿ ತಾಯಂದಿರು ತಲೆಮೇಲೆ ಬಟ್ಟೆ ಹಾಕ್ತಾರೆ ಅದು ಬೇಡ್ವೇ?, ನಾನು ಹಾಕಿರೋ ಮಾಸ್ಕ್ ಹಿಜಾಬಿದ್ದಂತೆ. ಕೋವಿಡ್ನಲ್ಲಿ ಇದು ಒಳ್ಳೆಯದಲ್ವೇ?, ಬೊಮ್ಮಾಯಿಯವರು ಹಿಜಾಬ್ ಹಾಕಿದ್ದಾರೆ.
ಸಚಿವರು ಮಾಸ್ಕ್ ಎಂಬ ಹಿಜಾಬ್ ಹಾಕಿದ್ದಾರೆ. ಮಾಸ್ಕ್ ಹಾಕಿದ್ರೂ ಅದು ತಪ್ಪೇ?, ಬಟ್ಟೆ ಮಾಸ್ಕ್ ರೀತಿ ಹಾಕೋದು ತಪ್ಪೆ?, ಮಕ್ಕಳನ್ನೇ ಗೇಟಿನಿಂದ ಹೊರಗಿಡುವುದು ಸರಿಯೇ?, ಪೊಲೀಸರನ್ನು ಬಿಟ್ಟು ಲಾಠಿ ಪ್ರಹಾರ ಮಾಡುತ್ತೀರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಬಿಸಿ ನಾಗೇಶ್ ಉತ್ತಮ ಮನುಷ್ಯ. ಹಿಜಾಬ್ ವಿಚಾರದಲ್ಲಿ ನೇರ ನಿರ್ಧಾರ ತೆಗೆದುಕೊಳ್ಳಲಿ. ಕೋರ್ಟ್ ತೀರ್ಪು ಹೊರ ಬರಲಿ. ಹಿಂದೆ ನಾನು ಸಚಿವನಾಗಿದ್ದಾಗ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕುಂಕುಮ ಇಡೋಕೆ ಬಿಡಲಿಲ್ಲ. ಆಗ ನಾನು ಅದನ್ನು ವಿರೋಧಿಸಿದ್ದೆ. ಕುಂಕುಮ ಇಟ್ಟುಕೊಳ್ಳೋಕೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದೆ.
ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮುಖಮುಚ್ಚಿಕೊಂಡು ಹೆಣ್ಣುಮಕ್ಕಳು ಓದುವುದಕ್ಕೆ ಬರ್ತಾರೆ. ಅಲ್ಲೇನು ಬ್ಯೂಟಿಷಿಯನ್ ಮಾಡೋಕೆ ಬರಲ್ಲ ಎಂದು ಗುಡುಗಿದರು. ನಮ್ಮಲ್ಲೂ ಕೆಲವರು ಹಾಕ್ತಾರೆ. ಕೆಲವರು ಹಾಕಲ್ಲ. ನಾವು ಮನೆಯಲ್ಲಿ ಯಾಕೆ ಹಾಕಲ್ಲ ಎಂದು ಕೇಳಲ್ಲ.
ಶಾಂತಿಯುತವಾಗಿ ವಿದ್ಯೆ ಕಲಿಯಲು ಮಕ್ಕಳನ್ನು ಬಿಡಿ, ಅವರ ಮೇಲೆ ಒತ್ತಡ ಹಾಕಿ ಹಾಳು ಮಾಡಬೇಡಿ. ಸರ್ಕಾರ ವಿವಾದವನ್ನು ಎಳೆಯುವುದು ಬೇಡ. ಎಸ್ಡಿಪಿಐ ಮಾಡ್ತಾರೆ ಅನ್ನೋದು ಬೇಡ. ಸಂಘ ಪರಿವಾರದವರು ಮಾಡ್ತಿದ್ದಾರೆ ಅನ್ನೋದು ಬೇಡ. ಹಿಜಾಬ್ನಿಂದ ರಾಜಕೀಯ ಉಪಯೋಗವಾಗಲ್ಲ. ನಾನು ಬಗೆಹರಿಯುತ್ತದೆ ಎಂದು ಸುಮ್ಮನಿದ್ದೆ. ಆದರೆ, ಇದನ್ನು ಬಿಬಿಸಿ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನಮ್ಮ ದೇಶದ ಮಾನವನ್ನು ಕಳೆಯುತ್ತಿದ್ದಾರೆ. ಅದಕ್ಕೆ ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದರು.
ಮೈಸೂರಿನಲ್ಲಿ ಮುಖಂಡರ ಸಭೆ ಮಾಡಿದ್ದೇನೆ. ನಿನ್ನೆ ನನ್ನ ಮನೆಯಲ್ಲೂ ಸಭೆ ಮಾಡಿದ್ದೇನೆ. ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳ ಸಭೆ ಮಾಡಿದ್ದೆ. ಫೆಬ್ರವರಿ 14ರಂದು ಹುಬ್ಬಳ್ಳಿಯಲ್ಲೊಂದು ಸಭೆ ಕರೆದಿದ್ದೇನೆ. ಜನತಾದಳದ ಪರವಾಗಿ ಒಲವು ಕಂಡು ಬಂದಿದೆ. ಸುತ್ತೂರು ಸ್ವಾಮೀಜಿಗಳ ಜೊತೆ ಚರ್ಚಿಸಿದ್ದೇನೆ. ಸ್ವಾಮೀಜಿ ಕೂಡ ನನಗೆ ಆಶೀರ್ವದಿಸಿದ್ದಾರೆ ಎಂದರು.
ಅಲಿಂಗೌ ಚಳವಳಿ ಮಾಡುತ್ತೇವೆ. ಬಹುಸಂಖ್ಯಾತರು ನಮ್ಮನ್ನು ಅಪ್ಪಿಕೊಳ್ಳುವ ಚಳವಳಿ. ಸಮಾಜ ಹತ್ತಿರ ತರುವ ವ್ಯವಸ್ಥೆಯಾಗಿದೆ. ಬಸವಣ್ಣನವರು ಮಾಡಿದ್ದ ಚಳವಳಿ ನಾನು ಮಾಡ್ತೇನೆ. ಹುಬ್ಬಳ್ಳಿಯಲ್ಲಿ ಸಭೆ ಇದೆ. ಅದರ ನಂತರ ಜೆಡಿಎಸ್ ಸೇರ್ಪಡೆ ಬಗ್ಗೆ ಹೇಳ್ತೇನೆ. ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಿದ್ದಿದ್ದೇನೆ.
ಎಂಎಲ್ಸಿ ಸ್ಥಾನಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಕಾರಣ ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ. ಹಿಂದೆ ಕಾಯ್ದೆಗೆ ನಾನು ವಿರೋಧಿಸಿದ್ದೆ. ನಾನು ಈಗಲೇ ರಾಜೀನಾಮೆ ಕೊಟ್ಟರೆ ಬಿಲ್ ಪಾಸಾಗಿ ಬಿಡುತ್ತದೆ. ಅಲ್ಲಿ ನಾನಿದ್ದರೆ ಕಷ್ಟವಾಗುತ್ತದೆ. ಆ ಕಾರಣಕ್ಕಾಗಿ ನಾನು ಎಂಎಲ್ಸಿ ಸ್ಥಾನಕ್ಕೆ ರಿಸೈನ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಅಹಿಂದ ಅಲ್ಲೇ ಬಿಟ್ಟಿದ್ದಾರೆ. ನಾವು ಅಲಿಂಗೌ ಚಳವಳಿ ಮಾಡ್ತಿದ್ದೇವೆ. ಯಡಿಯೂರಪ್ಪ ಜೊತೆಯೂ ಮಾತನಾಡಿದ್ದೇವೆ. ನಾನು ಜೆಡಿಎಸ್ಗೆ ಹೋಗುತ್ತೇನೆ. ಬಿಜೆಪಿ ಏಳು ವರ್ಷದಿಂದ ಏನು ಮಾಡಿದೆ?. ಕಾಂಗ್ರೆಸ್ ಇಲ್ಲಿಯವರೆಗೆ ಏನು ಮಾಡಿದೆ?. ಇದರಿಂದ ಹೊರತಾದ ಥರ್ಡ್ ಫೋರ್ಸ್ ಬರಬೇಕು. ಜೆಡಿಎಸ್ ಆ ಲೆವೆಲ್ಗೆ ಬರುತ್ತೆ ಅಂತಾ ನಮ್ಮ ಅಭಿಮತ. ಟಿಎಂಸಿ,ಎಸ್ಪಿ,ಬಿಎಸ್ಪಿ ಆದರೆ ಒಂದರಿಂದ ಎಣಿಕೆ ಮಾಡಬೇಕು. ಜೆಡಿಎಸ್ ಆದರೆ 31ರಿಂದ ಎಣಿಕೆ ಮಾಡಬೇಕಿದೆ. ಹಾಗಾಗಿ, ಇದಕ್ಕೆ ಉತ್ತೇಜನ ಕೊಡ್ತೇವೆ ಎಂದರು.
ಇದನ್ನೂ ಓದಿ: ಮತ್ತೆ ನಿಲ್ಲದ ಡಿಕೆಶಿ-ಸಿದ್ದರಾಮಯ್ಯ ಶೀತಲ ಸಮರ.. ರಾಜ್ಯ ಕಾಂಗ್ರೆಸ್ಗೆ ಮುಳುವಾಗಲಿದೆಯಾ ಜಟಾಪಟಿ?