ನಮ್ಮ ಮೆಟ್ರೋ ಬಹುತೇಕ ಮಾರ್ಗಗಳು 2020ರೊಳಗೆ ಸಂಚಾರಕ್ಕೆ ಮುಕ್ತ: ಸಿಎಂ ಜೊತೆ ಅಧಿಕಾರಿಗಳ ಚರ್ಚೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ. ಎಲ್) ‘ನಮ್ಮ ಮೆಟ್ರೋ’ ಪ್ರಗತಿ ಪರಿಶೀಲನೆ ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಗರದ ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ. ಎಲ್) ‘ನಮ್ಮ ಮೆಟ್ರೋ’ ಪ್ರಗತಿ ಪರಿಶೀಲನೆ ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ. ವಿಜಯ ಭಾಸ್ಕರ್, ಬಿ. ಎಂ ಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಚರ್ಚಿಸಲಾದ ವಿಷಯಗಳು:
1. ಬೆಂಗಳೂರಿನ ವಾಹನ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ, ಸುಗಮ ಹಾಗೂ ತ್ವರಿತ ಸಂಚಾರಕ್ಕೆ ನಮ್ಮ ಮೆಟ್ರೋ ಮಹತ್ತರವಾದ ಕೊಡುಗೆ ನೀಡಿದೆ.
2. ಪೀಕ್ ಸಮಯದಲ್ಲಿ (peak hour) ಒಂದು ಮಾರ್ಗದಲ್ಲಿ 19500 ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದು, ಪ್ರತಿ ದಿನ ಸುಮಾರು 4.5 ಲಕ್ಷ ಜನ ಮೆಟ್ರೊ ಮೂಲಕ ಪ್ರಯಾಣಿಸುತ್ತಿರುವುದು ಇದರ ಉಪಯುಕ್ತತೆಗೆ ಸಾಕ್ಷಿ.
3. ಪ್ರಸ್ತುತ 72 ಕಿ.ಮೀ ಉದ್ದ ಹಾಗೂ 61 ನಿಲ್ದಾಣಗಳನ್ನು ಹೊಂದಿರುವ ಮೆಟ್ರೋ-2 ನೇ ಹಂತ ಅನುಷ್ಠಾನದ ವಿವಿಧ ಹಂತಗಳಲ್ಲಿದೆ.
4. ಬಹುತೇಕ ಮಾರ್ಗಗಳು 2020 ರೊಳಗೆ ಸಂಚಾರಕ್ಕೆ ಮುಕ್ತವಾಗಲಿವೆ.
5. ಕರ್ನಾಟಕ ಸರ್ಕಾರವು, 2ನೇ ಹಂತ ‘ಎ’ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂವರೆಗೆ 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು 5995 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದೆ.
6. 2ನೇ ಹಂತ ‘ಬಿ’ ಅಡಿಯಲ್ಲಿ ಕೆ.ಆರ್.ಪುರಂ ನಿಂದ ಏರ್‍ಪೋರ್ಟ್‍ವರೆಗೆ 38 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ರೂ. 10,584 ಕೋಟಿ ವೆಚ್ಚದಲ್ಲಿ ಕೈಗೊಂಡಿದೆ.
7. ಈ ಎರಡು ಮಾರ್ಗಗಳ ವ್ಯಾಪ್ತಿಯಲ್ಲಿ ಬರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಇದರಿಂದ ಬಹಳ ಉಪಯೋಗವಾಗಲಿದೆ.
8. ಈಕ್ವಿಟಿ ಶೇರಿಂಗ್ ಜಂಟಿ ಉದ್ಯಮ ಮಾದರಿಯಡಿಯಲ್ಲಿ ಭಾರತ ಸರ್ಕಾರದಿಂದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ.
9. ಫೇಸ್-3 ರಲ್ಲಿ 86 ಕಿ.ಮೀ. ಉದ್ದದ 6 ಹೊಸ ಮೆಟ್ರೋ ಮಾರ್ಗ ನಿರ್ಮಿಸಲು ನಿರ್ಧರಿಸಿದ್ದು ಇದು ಹಂತ 1– ಮತ್ತು ಹಂತ-2 ನ್ನು ಸಂಪರ್ಕಿಸುವ ಉದ್ದೇಶವೂ ಇದೆ.
10. ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೊ ಮತ್ತು ಬಸ್‍ಗಳಲ್ಲಿ ಉಪಯೋಗಿಸಬಹುದಾದ ಸಾಮಾನ್ಯ ಸಂಚಾರಿ ಕಾರ್ಡ್‍ನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.
11. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್ ಸೇವೆಗಳನ್ನು ಕಲ್ಪಿಸಲಾಗುವುದು.
12. ಈಗ ಇರುವ ಮೂರು ಕೋಚ್‍ಗಳುಳ್ಳ 50 ರೈಲುಗಳನ್ನು, 6 ಕೋಚ್ ರೈಲುಗಳಾಗಿ ಮೇಲ್ದರ್ಜೆಗೇರಿಸಲಾಗುವುದು.
13. ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕ ಸೈಕಲ್ ಸೇವೆಯನ್ನು ಒದಗಿಸಲಾಗುವುದು.
14. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.
15. ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ರೈಲ್ವೆ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುವುದು.
16. ಪರಿಸರದ ದೃಷ್ಟಿಯಿಂದಲೂ ನಮ್ಮ ಮೆಟ್ರೊ ಅತ್ಯುತ್ತಮ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
17. ಪಾದಚಾರಿ ಮೇಲ್ಸೇತುವೆ ಮಾರ್ಗ ಮತ್ತು 6 ಕೋಚ್‍ಗಳ ಮೆಟ್ರೋ ರೈಲು ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವಲ್ಲಿ ಅನುಮಾನವಿಲ್ಲ.
18. ಮೆಟ್ರೋ ಎರಡನೇ ಹಂತದ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಾಮಗಾರಿಗಳನ್ನು ಮುಗಿಸಿ, ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸೂಚಿನೆ.
19. ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿ ಅವಘಡ ಉಂಟಾಗಿ ಪ್ರಾಣಹಾನಿಯಾಗಿದೆ.
20. ಪ್ರಯಾಣಿಕರ ಸುರಕ್ಷತೆಗೆ ಅತಿಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಿಯೂ ಅಪಘಾತ, ಅವಘಡವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ.
21. ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸದೆ, ದುರಸ್ತಿ ಕೆಲಸಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಮುಗಿಸಬೇಕು.
22. ಎಂಜಿನಿಯರ್ ಗಳ ತಂಡಗಳು ನಿಯಮಿತವಾಗಿ ಮೆಟ್ರೋ ಪಿಲ್ಲರ್ ಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು.
23. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ನಿಭಾಯಿಸಲು ಮೆಟ್ರೋ ಸಮಯ ವಿಸ್ತರಣೆ ಮಾಡಬೇಕು.
24. ಪ್ರಯಾಣಿಕರ ಅಹವಾಲು/ಆಕ್ಷೇಪಗಳಿದ್ದಲ್ಲಿ ಅವುಗಳನ್ನು ತ್ವರಿತವಾಗಿ ಪರಿಹರಿಸಲು ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸಿಕೊಳ್ಳುವುದು ಸೂಕ್ತ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.