ಬೆಂಗಳೂರು:ಆರ್ಎಸ್ಎಸ್ನ 2ನೇ ಅತ್ಯುನ್ನತ ಹುದ್ದೆಯಾದ ಅಖಿಲ ಭಾರತ ಸರಕಾರ್ಯವಾಹರಾಗಿ ನಿಯುಕ್ತಿ ಹೊಂದಿರುವ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ, ನಿಷ್ಠಾವಂತ ಸ್ವಯಂ ಸೇವಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಉನ್ನತ ಸ್ಥಾನಕ್ಕೇರಿರುವುದು ಹೆಮ್ಮೆಯ ವಿಷಯ. ಸಂಘಟನಾ ಚಾತುರ್ಯ, ಸಮಾಜದ ಆಗು-ಹೋಗುಗಳ ಕುರಿತ ಅರಿವು, ಸಂವೇದನಾಶೀಲತೆ ಹೊಂದಿರುವ ಅವರು ಬಹುವಿಧ ಆಸಕ್ತಿ ಹಾಗೂ ಬಹುಮುಖ ಪ್ರತಿಭೆಯ ಸಂಗಮ. ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೊಸಬಾಳೆಯವರು ಅಂದಿನ ಕರಾಳ ಅನುಭವದ ಚಿತ್ರಣ ನೀಡುವ 'ಭುಗಿಲು' ಸಂಪಾದನಾ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಡಿಯಾ ಪಾಲಿಸಿ ಫೌಂಡೇಷನ್ನ ಸ್ಥಾಪಕ ಸದಸ್ಯರಾಗಿ, 'ಅಸೀಮಾ' ಮಾಸ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಗಮನ ಸೆಳೆದವರು ಎಂದು ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸರಕಾರ್ಯವಾಹರ ಹೊಣೆಗಾರಿಕೆ ಅವರ ಪ್ರತಿಭೆ, ಸಾಮರ್ಥ್ಯಕ್ಕೆ ಸಂದ ಗೌರವವಾಗಿದೆ. ಭಗವಂತನು ಅವರಿಗೆ ಆಯುರಾರೋಗ್ಯವನ್ನು ಕರುಣಿಸಿ, ಭಾರತ ಮಾತೆಯ ಸೇವೆಯಲ್ಲಿ ಇನ್ನಷ್ಟು ತತ್ಪರರಾಗಲು ಸ್ಫೂರ್ತಿ ನೀಡಲಿ ಎಂದು ಮುಖ್ಯಮಂತ್ರಿ ಬಿಎಸ್ವೈ ಹಾರೈಸಿದ್ದಾರೆ.
ಓದಿ:ಆರ್ಎಸ್ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕ
ನಳಿನ್‍ಕುಮಾರ್ ಅಭಿನಂದನೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಕಾರ್ಯವಾಹರಾಗಿ ಆಯ್ಕೆ ಆಗಿರುವ ಸಮರ್ಥ ವ್ಯಕ್ತಿತ್ವದ ದತ್ತಾತ್ರೇಯ ಹೊಸಬಾಳೆಯವರನ್ನು ಅಭಿನಂದಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಹೊಸಬಾಳೆ ಅವರ ಜ್ಞಾನ, ಸಂಘಟನಾ ಸಾಮರ್ಥ್ಯ ಮತ್ತು ಸಕ್ರಿಯ ಚಟುವಟಿಕೆಗೆ ಸಂದ ಮನ್ನಣೆಯಿದು ಎಂದು ಹೇಳಿದ್ದಾರೆ.
ಕಾರಜೋಳ ಅಭಿನಂದನೆ:ಆರ್ಎಸ್ಎಸ್ನ ಎರಡನೇ ಅತ್ಯುನ್ನತ ಹುದ್ದೆಯಾದ ಅಖಿಲ ಭಾರತ ಸರಕಾರ್ಯವಾಹರಾಗಿ ನಿಯುಕ್ತಿ ಹೊಂದಿರುವ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರಿಗೆ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ, ನಿಷ್ಠಾವಂತ ಸ್ವಯಂ ಸೇವಕರಾಗಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಉನ್ನತ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸಂಘಟನಾ ಚಾತುರ್ಯ, ಸಮಾಜದ ಆಗುಹೋಗುಗಳ ಕುರಿತ ಅರಿವು, ಸಂವೇದನಾಶೀಲತೆ ಹೊಂದಿರುವ ಅವರು ಬಹುಮುಖ ಪ್ರತಿಭೆಯಾಗಿದ್ದು, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇಂಡಿಯಾ ಪಾಲಿಸಿ ಫೌಂಡೇಷನ್ ಸ್ಥಾಪಕ ಸದಸ್ಯರಾಗಿ, ‘ಅಸೀಮಾ’ ಮಾಸ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಗಣನೀಯ ಸೇವೆಸಲ್ಲಿಸಿದ್ದಾರೆ. ಅವರಿಗೆ ಭಗವಂತ ಆಯುರಾರೋಗ್ಯವನ್ನು ಕರುಣಿಸಿ, ಭಾರತಮಾತೆಯ ಸೇವೆಯಲ್ಲಿ ಇನ್ನಷ್ಟು ತತ್ಪರರಾಗಲು ಸ್ಫೂರ್ತಿ ನೀಡಲಿ ಎಂದು ಹಾರೈಸುವುದಾಗಿ ಡಿಸಿಎಂ ತಿಳಿಸಿದ್ದಾರೆ.