ಬೆಂಗಳೂರು :ರೋಗ ಲಕ್ಷಣವಿಲ್ಲದ ಕೊರೊನಾ ಸೋಂಕಿತರಿಗೆ ಬೆಡ್ಗಳ ಕೊರತೆ ಎದುರಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರವನ್ನು ನಾಳೆಯಿಂದಲೇ ಸೇವೆಗೆ ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ನಿನ್ನೆಯಷ್ಟೇ ಈ ಬಗ್ಗೆ 'ಈಟಿವಿ ಭಾರತ' ವಿಸ್ತೃತ ವರದಿ ಪ್ರಕಟಿಸಿತ್ತು.
ಸದ್ಯ ಇರುವ ಎಂಟು ಕೋವಿಡ್ ಕೇರ್ ಸೆಂಟರ್ಗಳು ಬಹುತೇಕ ಭರ್ತಿಯಾಗಿವೆ. ಬೆಡ್ಗಳ ಕೊರತೆ ಎದುರಾಗಿರುವ ಬಗ್ಗೆ ದಕ್ಷಿಣ ವಲಯದ ಜನಪ್ರತಿನಿಧಿಗಳ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ತರಲಾಯಿತು. ಕೂಡಲೇ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಿಸಿರುವ ಏಷ್ಯಾದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಳಕೆಗೆ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಅವರು ಪಡೆದುಕೊಂಡರು. ನಾಳೆಯಿಂದಲೇ ರೋಗ ಲಕ್ಷಣ ಇಲ್ಲದ ಕೊರೊನಾ ಸೋಂಕಿತರನ್ನು ಬಿಐಇಸಿ ಸೆಂಟರ್ಗೆ ಕಳುಹಿಸುವಂತೆ ಸೂಚನೆ ನೀಡಿದರು.
ಇದನ್ನು ಓದಿ: ಭರ್ತಿಯಾಗಿವೆ ಕೋವಿಡ್ ಕೇರ್ ಸೆಂಟರ್: ಬೆಡ್ ಸಮಸ್ಯೆ ಉಲ್ಬಣ ಸಾಧ್ಯತೆ
10 ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 5 ಸಾವಿರ ಬೆಡ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನೂರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿ ನೀಡಲಾಗುತ್ತಿದೆ. ಆದರೆ ಅಗತ್ಯ ಮೂಲಸೌಕರ್ಯ ಇನ್ನು ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಆದರೂ ನಾಳೆಯಿಂದ ರೋಗಲಕ್ಷಣ ರಹಿತ ಕೊರೊನಾ ಸೋಂಕಿತರನ್ನು ಕಳಿಹಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಬೆಡ್ ಖರೀದಿ, ಬಾಡಿಗೆ ವಿಷಯ ದೊಡ್ಡ ವಿವಾದವಾಗಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗುವ ಮುನ್ನವೇ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಸಿಎಂ ಸೇರಿ ಸಚಿವರಿಂದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಿನ್ನೆ 'ಭರ್ತಿಯಾಗಿವೆ ಕೋವಿಡ್ ಕೇರ್ ಸೆಂಟರ್: ಬೆಡ್ ಸಮಸ್ಯೆ ಉಲ್ಬಣ ಸಾಧ್ಯತೆ'ಎಂಬ ವಿಸ್ತಾರವಾದ ವರದಿಯನ್ನು 'ಈಟಿವಿ ಭಾರತ' ಪ್ರಕಟಿಸಿತ್ತು. ಆದಷ್ಟು ಬೇಗ ತುಮಕೂರು ರಸ್ತೆಯ ಕೋವಿಡ್ ಕೇರ್ ಸೆಂಟರ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಬೆಡ್ಗಾಗಿ ಸೋಂಕಿತರು ಬೀದಿಗಿಳಿಯಬೇಕಾಗಲಿದೆ ಎನ್ನುವ ಸುದ್ದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಇದೀಗ ಬಿಐಇಸಿ ಕೇಂದ್ರವನ್ನು ಬಳಸಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ.