ಕರ್ನಾಟಕ

karnataka

ETV Bharat / state

ಸಿಎಂ ಜತೆ ಪುತ್ರ ವಿಜಯೇಂದ್ರ ಕೂಡ ದೆಹಲಿಗೆ ಪ್ರಯಾಣ: ರಾಜ್ಯ ರಾಜಕೀಯದಲ್ಲಿ ಬದಲಾವಣೆ ಪರ್ವ?

ಸಿಎಂ ಬಿ.ಎಸ್.ಯಡಿಯೂರಪ್ಪ ಜತೆಗೆ ಪುತ್ರ ವಿಜಯೇಂದ್ರ ಕೂಡ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ

By

Published : Jul 16, 2021, 1:00 PM IST

Updated : Jul 16, 2021, 1:24 PM IST

ಬೆಂಗಳೂರು:ಕೇಂದ್ರ ಸಂಪುಟ ಪುನರ್​ರಚನೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪುತ್ರ ಹಾಗೂ ಆಪ್ತರೊಂದಿಗೆ ಸಿಎಂ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಯಾವುದಾದರೂ ಬದಲಾವಣೆಗೆ ಮುನ್ಸೂಚನೆ ನೀಡುತ್ತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

ಸಿಎಂ ಜತೆ ಪುತ್ರ ವಿಜಯೇಂದ್ರ ಕೂಡ ದೆಹಲಿಗೆ ಪ್ರಯಾಣ

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಸಿಎಂ, ಇಂದು ನಾನು ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಾಳೆ ವಾಪಸ್​ ಬರುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಹೆಚ್​​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ಆಪ್ತ ಲೆಹರ್ ಸಿಂಗ್ ಹಾಗೂ ಅಧಿಕಾರಿ ವಲಯದಿಂದ ಶಶಿಧರ್, ಗಿರೀಶ್ ಹೊಸೂರ್, ರಾಘವೇಂದ್ರ, ಸುಧೀರ್ ಕುಮಾರ್ ಸಿಂಗ್, ಕೆ. ಕಪ್ಫೋ ಪ್ರಯಾಣಿಸಿದರು.

ಹೈಕಮಾಂಡ್​​​​​ ಮೌನಕ್ಕೆ ಕಾರಣ ಏನು?

ಇಷ್ಟ ದಿನ ವರಿಷ್ಠರು ಪಂಚ ರಾಜ್ಯಗಳ ಚುನಾವಣೆ, ಕೇಂದ್ರ ಸಂಪುಟ ಪುನರ್​​ರಚನೆಯಲ್ಲಿ ತೊಡಗಿದ್ದ ಹಿನ್ನೆಲೆ ರಾಜ್ಯ ರಾಜಕಾರಣದ ಬಗ್ಗೆ ಅಷ್ಟಾಗಿ ಗಮನ ಹರಿಸಿರಲಿಲ್ಲ, ನಾಯಕತ್ವ ಬದಲಾವಣೆ ವಿವಾದ ಎದ್ದರೂ ಹೈಕಮಾಂಡ್ ಮೌನ ವಹಿಸಿತ್ತು. ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ಗೆ ನೋಟಿಸ್ ನೀಡಿದ್ದು ಬಿಟ್ಟರೆ ಹೈಕಮಾಂಡ್ ಮತ್ತೇನು ಕ್ರಮ ಕೈಗೊಂಡಿರಲಿಲ್ಲ. ಸಮಸ್ಯೆ ಪರಿಹರಿಸುವ ಗೋಜಿಗೂ ಹೋಗಿರಲಿಲ್ಲ. ರಾಜ್ಯ ಉಸ್ತುವಾರಿಯನ್ನು ಕಳುಹಿಸಿ ತಾತ್ಕಾಲಿಕ ಒಂದು ಪರಿಹಾರ ಸೂತ್ರ ನೀಡಲಾಗಿತ್ತು.

ಹೈಕಮಾಂಡೇ ಸಿಎಂರನ್ನ ದೆಹಲಿಗೆ ಕರೆಯಿಸಿಕೊಂಡಿತಾ?

ಆದರೆ, ಈಗ ಕೇಂದ್ರ ಸಂಪುಟ ಪುನಾ​ರಚನೆ ಮುಗಿದಿದ್ದು, ವರಿಷ್ಠರು ಕರ್ನಾಟಕ ರಾಜಕೀಯದತ್ತ ಗಮನ ಹರಿಸಲು ಮುಂದಾಗಿದ್ದಾರೆ. ಹಾಗಾಗಿಯೇ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಸಿಎಂ ಜೊತೆ ನಾಯಕತ್ವ ಬದಲಾವಣೆ ವಿವಾದದ ಕೇಂದ್ರ ಬಿಂದು ವಿಜಯೇಂದ್ರ ಕೂಡ ತೆರಳಿದ್ದಾರೆ.

ಅದೇ ರೀತಿ ದೆಹಲಿ ನಾಯಕರ ಜೊತೆ ಗಂಭೀರ ವಿಷಯಗಳ ಕುರಿತು ಮಾತುಕತೆ ನಡೆಸುವಾಗ ಯಡಿಯೂರಪ್ಪ ತಮ್ಮ ಆಪ್ತ ಲೆಹರ್ ಸಿಂಗ್ ರನ್ನು ಕರೆದುಕೊಂಡು ಹೋಗುತ್ತಾರೆ. ಈ ಹಿಂದೆ ಮೊದಲ ಬಾರಿ ಸಿಎಂ ಆದಾಗಿನಿಂದಲೂ ಅಡ್ವಾಣಿ ಸೇರಿ ವರಿಷ್ಠರ ಜೊತೆಗಿನ ಮಾತುಕತೆ ವೇಳೆ ಲೆಹೆರ್ ಸಿಂಗ್ ಯಡಿಯೂರಪ್ಪ ಜೊತೆ ಇರುತ್ತಿದ್ದರು. ಹಿಂದಿ ಭಾಷಿಕರ ಅಗತ್ಯಕ್ಕೆ ನಂಬಿಕಸ್ಥ ಲೆಹರ್ ಸಿಂಗ್​ ಅವ​ರನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಅದೇ ರೀತಿ ಈಗಲೂ ಲೆಹರ್ ಸಿಂಗ್ ರನ್ನು ಕರೆದೊಯ್ದಿದ್ದಾರೆ. ಹಾಗಾಗಿ ಗಂಭೀರ ವಿಷಯದ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಕೇವಲ ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತ ಚರ್ಚೆಗೆ ದೆಹಲಿ ಪ್ರವಾಸ ಎನ್ನುತ್ತಿದ್ದರೂ ಸಂಪುಟ ಪುನರ್​ರಚನೆ, ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಸೇರಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಪರ್ವ ಆರಂಭಕ್ಕೆ ಮುನ್ನುಡಿ ಬರೆಯುವ ರೀತಿ ಚಟುವಟಿಕೆಗಳು ನಡೆದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

Last Updated : Jul 16, 2021, 1:24 PM IST

ABOUT THE AUTHOR

...view details