ಬೆಂಗಳೂರು :ಸದ್ಯಕ್ಕೆ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ತಕ್ಷಣವೇ ತಜ್ಞರ ಸಮಿತಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮೂರು ತಿಂಗಳಲ್ಲಿ ಮೈ ಶುಗರ್ ಪುನಶ್ಚೇತನ :ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಮೈ ಶುಗರ್ ಕಾರ್ಖಾನೆ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಮೈ ಶುಗರ್ ಪುನಶ್ಚೇತನಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಂಬಂಧ ಈ ಮುಂಚೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸದ್ಯಕ್ಕೆ ವಾಪಸ್ ಪಡೆಯಲಾಗುತ್ತದೆ. ಎರಡು ವರ್ಷ ಸರ್ಕಾರದ ಸುಪರ್ದಿಯಲ್ಲೇ ಕಾರ್ಖಾನೆ ಪುನಶ್ಚೇತನಗೊಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ. ಪುನಶ್ಚೇತನ ಸಂಬಂಧ ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಮೂರು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದು ತಿಳಿಸಿದರು.
ಮುಂದಿನ ವರ್ಷದಿಂದ (ಮುಂದಿನ ಹಂಗಾಮು) ಕಬ್ಬು ನುರಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ತಕ್ಷಣ ಮೈ ಶುಗರ್ ಕಾರ್ಖಾನೆಗೆ ಎಂಡಿ(MD-Managing Director) ನೇಮಕ, ಅಗತ್ಯ ಹಣ ಬಿಡುಗಡೆ ಹಾಗೂ ಬೇಕಾದ ಎಲ್ಲಾ ಯಂತ್ರೋಪಕರಣ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುತ್ತದೆ. ಕೂಡಲೇ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಅಗತ್ಯ ಮಷಿನರಿ ಸರಿಪಡಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು. ಖಾಸಗೀಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸ್ ಪಡೆಯುತ್ತೇವೆ.
ಅಗತ್ಯ ಹಣಕಾಸು ನೆರವು ನೀಡಲಾಗುವುದು. ತಜ್ಞರ ಸಮಿತಿ ನೀಡುವ ವರದಿ ಆಧಾರದ ಮೇಲೆ ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಶಾಲೆ ಆರಂಭ ವಿಚಾರ :ಶಾಲೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಎಕ್ಸ್‌ಪರ್ಟ್ ಕಮಿಟಿ ವರದಿ ನೀಡಿದೆ. ಶಿಕ್ಷಣ ಆಯುಕ್ತರು ಹಾಗೂ ಕಾರ್ಯದರ್ಶಿ ಜೊತೆ ಚರ್ಚೆ ಮಾಡುತ್ತೇವೆ. ಶಾಲೆ ಆರಂಭ ಮಾಡಬೇಕಾ ಅಂತಾ ತೀರ್ಮಾನ ಮಾಡುತ್ತೇವೆ ಎಂದರು.