ಬೆಂಗಳೂರು: ಕಾಲಮಿತಿಯ ಒಳಗಡೆ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಗುರಿ ತಲುಪದ ಯೋಜನೆಗಳ ಕಡೆ ಆಸಕ್ತಿವಹಿಸಿ ವರ್ಷದ ಟಾರ್ಗೆಟ್ ಮುಟ್ಟಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ದಿಶಾ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಹಾಗಾಗಿ, ಈ ಯೋಜನೆ ಬಗ್ಗೆ ವಿಶೇಷ ಆಸಕ್ತಿ ವಹಿಸುವಂತೆ ತಿಳಿಸಿದರು.
ಈ ಯೋಜನೆಯಡಿ ಕಳೆದ ವರ್ಷ 19 ಲಕ್ಷ ಮನೆಗಳಿಗೆ ನಳ ಸಂಪರ್ಕ ನೀಡಲಾಗಿದೆ. ಪ್ರಸ್ತುತ ಪ್ರತಿದಿನ ಸರಾಸರಿ 7,000 ಮನೆಗಳಿಗೆ ಸಂಪರ್ಕ ನೀಡಲಾಗುತ್ತಿದೆ. ಅದಾಗ್ಯೂ ಅನುಮೋದನೆಯಾದ ಕಾಮಗಾರಿಗಳಿಗೆ ತ್ವರಿತ ಕಾರ್ಯಾದೇಶ ನೀಡುವುದು ಹಾಗೂ ಕಾರ್ಯಾದೇಶ ನೀಡಿದ ಕಾಮಗಾರಿಗಳು ಪ್ರಾರಂಭಗೊಳಿಸುವುದನ್ನು ಖಾತರಿ ಪಡಿಸುವಂತೆ ಹೇಳಿದರು.
ಕೆಲವು ಯೋಜನೆಗಳಲ್ಲಿ ಗುರಿ ತಲುಪಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಒಟ್ಟಾರೆ ಸಾಧನೆ ಉತ್ತಮವಾಗಿದ್ದರೂ, ಕೆಲವು ಜಿಲ್ಲೆಗಳ ಸಾಧನೆ ಕಡಿಮೆ ಇದೆ. ಇದನ್ನು ಸರಿಪಡಿಸಿ ಈ ವರ್ಷದ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸುವಂತೆ ಸಿಎಂ ಆದೇಶಿಸಿದರು. ಸದಸ್ಯರು ಕ್ಷೇತ್ರ ಭೇಟಿ ನೀಡಲು ವ್ಯವಸ್ಥೆ ಮಾಡಿ ವರದಿ ಸಲ್ಲಿಸಬೇಕು. ಪ್ರತಿ ಜಿಲ್ಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ದಿಶಾ ಸಮಿತಿ ಸಭೆ ಕಡ್ಡಾಯವಾಗಿ ನಡೆಸಬೇಕು. ಐಟಿಐ, ಜಿಟಿಟಿಸಿ, ಡಿಪ್ಲೊಮಾ ಕಾಲೇಜುಗಳು-ವರ್ಷದಲ್ಲಿ ಎರಡು ಸಲ ಮೂರು ತಿಂಗಳ ಕೋರ್ಸ್ ಆಯೋಜಿಸಬೇಕು. ಇದಕ್ಕೆ ಗುರಿ ನಿಗದಿ ಪಡಿಸಬೇಕೆಂದರು.