ಬೆಂಗಳೂರು: ಇಡೀ ರಾಜ್ಯವನ್ನ ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಸುತ್ತುತ್ತೇವೆ, ಹೊಸ ಕ್ಷೇತ್ರಗಳಲ್ಲೂ ಬಿಜೆಪಿ ಅರಳಿಸುತ್ತೇವೆ. ಕಾಂಗ್ರೆಸ್ ಅನ್ನು ಛಿದ್ರ ಛಿದ್ರ ಮಾಡುತ್ತೇವೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ ಮುಂದೆ 2023 ಕ್ಕೆ ಮತ್ತೆ ಬಿಜೆಪಿ ಬರುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಭೆಯಲ್ಲಿ ಪಾಲ್ಗೊಂಡು ಸಿಹಿ ಹಂಚಿ ಸಂಭ್ರಮಿಸಿದರು.
ಪಂಚರಾಜ್ಯ ಚುನಾವಣೆ ಗೆಲುವಿನ ಬಗ್ಗೆ ಸಿಎಂ ಸಂಸತ ನಂತರ ಮಾತನಾಡಿದ ಅವರು, ದೇಶಕ್ಕೆ ಇಂದು ಅತ್ಯಂತ ಸಂತೋಷದ ದಿನ. ಪಂಚ ರಾಜ್ಯಗಳ ಫಲಿತಾಂಶ ಭಾರತ ದೇಶ ಮುನ್ನಡೆಯುವ ದಿಕ್ಸೂಚಿಯಾಗಿದೆ. ಕೆಲವು ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಇದು ನಾಗರೀಕರ ಆತಂಕಕ್ಕೆ ಕಾರಣವಾಗಿತ್ತು. ಇವತ್ತು ವಿಚಿತ್ರ ಕಾರ್ಯ ಮಾಡುತ್ತಿದ್ದವರಿಗೆ ಸೋಲಾಗಿದೆ ಎಂದು ವ್ಯಾಖ್ಯಾನಿಸಿದರು.
ಪ್ರಧಾನಿ ಮೋದಿಯವರ ಹಲವಾರು ಯೋಜನೆಗಳ ಬಗ್ಗೆ ಎಲ್ಲರಿಗೂ ಗೌರವವಿದೆ. ಮೋದಿ ಮಾತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವವಿದೆ. ಅಷ್ಟೇ ಯಾಕೆ ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರ ಜೊತೆ ಮಾತನಾಡಿ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುವ ಶಕ್ತಿ ಮೋದಿಯವರಿಗೆ ಇದೆ ಎಂದರು.
ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಜಾತಿಯ ಲೆಕ್ಕ ಹಾಕಿದ್ದರು. ಆದರೆ ಪಿಎಂ ಮೋದಿ ಹಾಗೂ ಆದಿತ್ಯನಾಥ್ ತಂತ್ರಗಳು ಕೆಲಸ ಮಾಡಿವೆ. ಎಷ್ಟೇ ಅಪಪ್ರಚಾರ ಮಾಡಿದರೂ ಬಿಜೆಪಿಯ ಯೋಜನೆಗಳಿಂದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಕಮಲ ಅರಳಿದೆ. ಪಂಜಾಬ್ನಲ್ಲೂ 2024 ರ ಲೋಕಸಭಾ ಚುನಾವಣೆಯಲ್ಲಿ ಕಮಲ ಅರಳಲಿದೆ ಎಂದು ಭವಿಷ್ಯ ನುಡಿದರು.
ಈಗ ಪಂಜಾಬ್, ನಾಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗಲಿದೆ:ಕೋವಿಡ್ ನಡುವೆಯೂ ಯಶಸ್ವಿಯಾಗಿ ಕೆಲಸ ಮಾಡಲಾಗಿದೆ. ಅದರಲ್ಲೂ ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಕೋವಿಡ್ ನಿರ್ವಹಣೆ ಅದ್ಭುತವಾಗಿ ಮಾಡಿದ್ದರು. ನಮ್ಮ ಸಂಘಟನೆಯ ಬಲ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಸಂಘಟನೆ ಮಾಡಿದರೆ ಬಹುಮಾನ ಕೊಡುತ್ತಾರಂತೆ. ಅದು ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಯುಪಿಯಲ್ಲಿ ಕಾಂಗ್ರೆಸ್ ಸಿಂಗಲ್ ಡಿಜೆಟ್ ಬರೋದು ಅಸಾಧ್ಯ. ಕಾಂಗ್ರೆಸ್ ಮುಳುಗಿ ಹೋಗಿದೆ. ನಮ್ಮ ರಾಜ್ಯದಲ್ಲೂ ಮುಳುಗಿ ಹೋಗಲಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಶತಸಿದ್ಧ ಎಂದು ಸಿಎಂ ಬೊಮ್ಮಾಯಿ ಬಿಎಸ್ವೈ ನೇತೃತ್ವದಲ್ಲಿ ರಾಜ್ಯ ಪ್ರವಾಸ:ಗೋವಾದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಯುಪಿಯಲ್ಲಿ ಶೋಭಾ ಕರಾಂದ್ಲಜೆಯವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅರಳುವುದು ಖಚಿತ. ಬಜೆಟ್ನಲ್ಲಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. 2023 ರ ಚುನಾವಣೆಯಲ್ಲಿ ಜನರ ಮನಸ್ಸು ಗೆದ್ದು ಸುಭೀಕ್ಷವಾದ ಆಡಳಿತ ಕೊಡುತ್ತೇವೆ. ಇಡೀ ರಾಜ್ಯವನ್ನ ನಮ್ಮ ಯಡಿಯೂರಪ್ಪ ನೇತೃತ್ವದಲ್ಲಿ ಸುತ್ತುತ್ತೇವೆ. ಹೊಸ ಕ್ಷೇತ್ರಗಳಲ್ಲೂ ಬಿಜೆಪಿ ಅರಳಿಸುತ್ತೇವೆ. ಕಾಂಗ್ರೆಸ್ ಛಿದ್ರ ಛಿದ್ರ ಮಾಡುತ್ತೇವೆ ಎಂದು ಶಪಥ ಮಾಡಿದರು.
ಕಂಬ ನಿಂತರೂ ಗೆಲ್ಲುತ್ತಿದ್ದ ಪಕ್ಷದಲ್ಲಿ ಈಗ ಸೋನಿಯಾ, ರಾಹುಲ್ ಗೆಲ್ಲೋದೂ ಕಷ್ಟ:ಹಳ್ಳಿ ಹಳ್ಳಿಯೂ ನರೇಂದ್ರ ಮೋದಿಯನ್ನು ಒಪ್ಪಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕರಲ್ಲಿ ಮತ್ತೆ ನಾವು ಗೆದ್ದಿದ್ದೇವೆ. ಅಭೂತಪೂರ್ವವಾದ ಕಾಲ ನಮ್ಮದಾಗುತ್ತಿದೆ. ಹಿಂದೆ ವಿದ್ಯುತ್ ಕಂಬವನ್ನು ನಿಲ್ಲಿಸಿದ್ದರೂ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುತ್ತಿದ್ದರು. ಆದರೆ ಇಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿಲ್ಲಿಸಿದರೂ ಗೆಲ್ಲಲ್ಲ. ಆದರೆ ಬಿಜೆಪಿಯ ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲುತ್ತಾರೆ. ಗೋವಾದಲ್ಲಿ ಸರ್ಕಾರ ರಚಿಸುತ್ತೇವೆ ಅಂತಾ ಬ್ಯಾಗ್ ಹಿಡಿದುಕೊಂಡು ಹೋದವರು ಖಾಲಿ ಬ್ಯಾಗ್ ಹಿಡಿದುಕೊಂಡು ವಾಪಸ್ ಬರುತ್ತಾರೆ. ಕಾಂಗ್ರೆಸ್ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ವಂಶ ರಾಜಕಾರಣದಿಂದ ತಿರಸ್ಕಾರ ಮಾಡಿದ್ದಾರೆ. ಆದರೆ ಮೋದಿ ಸಂಕಷ್ಟ ಸಮಯದಲ್ಲಿ ನಡೆಸಿದ ಆಡಳಿತ ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಶಾಸಕರು ಬಿಜೆಪಿ ಬರಲು ಸಿದ್ಧರಿದ್ದಾರೆ:ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಒಳಜಗಳ ಜೋರಾಗಿದೆ. ಒಬ್ಬರು ಶಾಲು ಕೊಡುವುತ್ತಿದ್ದಾರೆ, ಮತ್ತೊಬ್ಬರು ದಾಡಿ ತಿರುಚುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ದೂರವಿಡಲು ಡಿಕೆಶಿ ತಂತ್ರ ಮಾಡುತ್ತಿದ್ದಾರೆ. ಇವತ್ತು ಹತ್ತಾರು ಜನ ನನ್ನ ಜೊತೆ, ಸಿಎಂ ಜೊತೆ ಶ್ರೀರಾಮುಲು ಜೊತೆ ಸಂಪರ್ಕದಲ್ಲಿದ್ದಾರೆ. ನಿಮ್ಮ ಪಕ್ಷಕ್ಕೆ ಬರುತ್ತೇವೆ ಅಂತಿದ್ದಾರೆ ಎಂದರು.
ಇದನ್ನೂ ಓದಿ:ಬೆಂಗಳೂರು: ಮದುವೆ ಆಮಿಷವೊಡ್ಡಿ ಮಹಿಳಾ ಪೊಲೀಸ್ ಮೇಲೆ ಇನ್ಸ್ಪೆಕ್ಟರ್ ಅತ್ಯಾಚಾರ, ಗರ್ಭಪಾತ