ಬೆಂಗಳೂರು:ಆದಾಯ ಕೊರತೆ ನಡುವೆಯೂ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದ್ದು, ಈ ಬಾರಿ ಭರವಸೆ ಈಡೇರುವ ಬಜೆಟ್ ಅನ್ನೇ ಮಂಡಿಸಿದ್ದೇನೆ, ಮುಂದಿನ ವರ್ಷದ ಮಾರ್ಚ್ನಲ್ಲಿ ನಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಉತ್ತರ ಕೊಡಲಿದ್ದೇನೆ. ಎಲ್ಲರನ್ನು ಒಳಗೊಂಡ ಭರವಸೆಯ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಬಗೆಗಿನ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬಜೆಟ್ ಮಂಡನೆ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದೆರಡು ವರ್ಷದಲ್ಲಿ ಆರ್ಥಿಕತೆಗೆ ಪೆಟ್ಟು ನೀಡಿದ ಕೊರೊನಾ, ನೈಸರ್ಗಿಕ ವಿಕೋಪಗಳಿಂದ ಆರ್ಥಿಕ ಹಿನ್ನಡೆ, 2021-22ರ ಅವಧಿ ಬಳಿಕ ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ ರಾಜಸ್ವ ಸಂಗ್ರಹ, ಸ್ವೀಕೃತಿಗಳು ನಮ್ಮ ಗುರಿ ಮುಟ್ಟಲಿವೆ. 2022-23ರ ಬಜೆಟ್ ಗಾತ್ರ 2,65,720 ಕೋಟಿ ಆಗಿದೆ. 19,513 ಕೋಟಿ ರೂ. ಗಾತ್ರ ಹೆಚ್ಚಳ, 2006ರಿಂದ ಆದಾಯ ಕೊರತೆ ಇತ್ತು. ಕಳೆದ ಬಾರಿ ಆದಾಯ ಕೊರತೆ 15,134 ಕೋಟಿ ರೂ. ಇತ್ತು, ಈ ಬಾರಿ 14,699 ಕೋಟಿ ರೂ. ಆದಾಯ ಕೊರತೆ ಇದೆ, ಈ ಸಲ ಆದಾಯ ಕೊರತೆ ಪ್ರಮಾಣ 430 ಕೋಟಿ ಕಡಿಮೆಯಾಗಿದೆ, ಇದು ಉತ್ತಮ ಹಣಕಾಸು ನಿರ್ವಹಣೆಯಾಗಿದೆ ಎಂದು ತಿಳಿಸಿದರು.
ಕಳೆದ ಸಲ ಕೇಂದ್ರ ಸರ್ಕಾರ ಕೋವಿಡ್ ಕಾರಣದಿಂದ ಶೇ.4ರ ಪ್ರಮಾಣದಲ್ಲಿ ಸಾಲ ಪಡೆಯಲು ಅವಕಾಶ ಕೊಟ್ಟಿತ್ತು, ಅದರ ಪ್ರಕಾರ 67,100 ಕೋಟಿ ಸಾಲ ಪಡೆಯಲು ಅವಕಾಶ ಇತ್ತು, ಆದರೆ ನಾವು 63,100 ಕೋಟಿ ರೂ. ಸಾಲ ಪಡೆದೆವು, 4 ಸಾವಿರ ಕೋಟಿ ಸಾಲ ಪಡೆಯದೇ ಆರ್ಥಿಕ ಶಿಸ್ತು ಕಾಪಾಡಿದ್ದೇವೆ, ಈ ಸಲವೂ ಪೂರ್ಣ ಪ್ರಮಾಣದಲ್ಲಿ ಸಾಲ ಪಡೆಯಲ್ಲ, ಶೇ.3.26ರ ಮಿತಿಯಲ್ಲಿ ಸಾಲ ಪಡೆಯುತ್ತೇವೆ, 4 ಸಾವಿರ ಕೋಟಿ ರೂ. ಸಾಲ ಪಡೆಯದ ಮಿತಿಗೆ ಒಳಪಟ್ಟಿದ್ದೇವೆ ಎಂದರು.
ಆರ್ಥಿಕ ಶಿಸ್ತು ಪಾಲನೆ, ಸಂಪನ್ಮೂಲಗಳ ಕ್ರೋಢೀಕರಣ, ಅನಗತ್ಯ ವೆಚ್ಚ ಕಡಿತ ನಮ್ಮ ಮುಂದಿನ ಗುರಿಯಾಗಿದೆ. ರಾಜಸ್ವ ಸ್ವೀಕೃತಿಗಳು 1,89,888 ಕೋಟಿ ಆಗಿದೆ, ಜಿಎಸ್ಟಿ ಪರಿಹಾರ ಈ ಬಜೆಟ್ನಲ್ಲಿ ಲೆಕ್ಕ ಹಾಕಿಕೊಂಡಿಲ್ಲ, ಜಿಎಸ್ಟಿ ಪರಿಹಾರ 11-13 ಸಾವಿರ ಕೋಟಿ ರೂ. ವಾರ್ಷಿಕ ಸಿಕ್ತಿತ್ತು, ಜಿಎಸ್ಟಿ ಪರಿಹಾರ ಬರೋದು ಈ ವರ್ಷ ನಿಲ್ಲುತ್ತದೆ, ಇನ್ನೂ ಮೂರು ವರ್ಷ ಜಿಎಸ್ಟಿ ತೆರಿಗೆ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇವೆ, ಕೇಂದ್ರದ ತೆರಿಗೆ ಪಾಲು 29,783 ಕೋಟಿ ರೂ ಆಗಿದೆ, ಕೇಂದ್ರದಿಂದ ಸಹಾಯಧನವೂ 17,281 ಕೋಟಿ ರೂ ಬರಲಿದೆ, ತೆರಿಗೆ ಸಂಗ್ರಹದಲ್ಲಿ ಕಳೆದ ವರ್ಷದ ಗುರಿಗಿಂತ ಹೆಚ್ಚು ಸಾಧನೆಯಾಗಿದೆ. ಜಿಎಸ್ಟಿ, ಅಬಕಾರಿ, ತೆರಿಗೆ ರಹಿತ ಆದಾಯ, ಮುದ್ರಾಂಕದಲ್ಲಿ ಗುರಿ ಮುಟ್ಟಲಿದ್ದೇವೆ, ಕೋವಿಡ್ ಕಾರಣದಿಂದ ವಾಹನ ಮಾರಾಟ ಕಡಿತಗೊಂಡಿದ್ದು, ಮೋಟಾರು ತೆರಿಗೆ ಸಂಗ್ರಹದಲ್ಲಿ ಮಾತ್ರ ನಮಗೆ ಕಡಿಮೆಯಾಗಲಿದೆ. ತೆರಿಗೆಯೇತರ ಆದಾಯ ಹೆಚ್ಚಾದಷ್ಟೂ ಆರ್ಥಿಕ ಶಿಸ್ತು ಹೆಚ್ಚಲಿದೆ, ಗಣನೀಯ ಪ್ರಮಾಣದಲ್ಲಿ ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಮ್ಮ ಬಜೆಟ್ನಲ್ಲಿ ಕೃಷಿ, ಉತ್ಪಾದನೆ, ಸೇವಾ ವಲಯ ಮೂರಕ್ಕೂ ಆದ್ಯತೆ ಕೊಡಲಾಗಿದೆ. ಯಶಸ್ವಿನಿ ಮರಳಿ ತರಬೇಕು ಎಂದು ರೈತರು ಬೇಡಿಕೆ ಇರಿಸಿದ್ದರು. ಯೋಜನೆಯಲ್ಲಿನ ಕೆಲ ನ್ಯೂನತೆ ಸರಿಪಡಿಸಿ ಮರು ಜಾರಿ ಮಾಡುತ್ತಿದ್ದೇವೆ. ಇದಕ್ಕಾಗಿ 300 ಕೋಟಿ ಹಣ ಇಡಲಾಗಿದೆ. 22 ಲಕ್ಷ ರೈತರಿಗೆ ಕಳೆದ ಬಾರಿ ಬಡ್ಡಿ ರಹಿತ ಸಾಲ ನೀಡಲಾಗಿತ್ತು. ಈ ಬಾರಿ 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ. ಹಾಲು ಉತ್ಪಾದಕ ರೈತರಿಗೆ ಕ್ಷೀರ ಸಮೃದ್ಧ ಸಹಕಾರ ಬ್ಯಾಂಕ್ ನಡಿ ನೆರವು ಕಲ್ಪಿಸಲಿದ್ದೇವೆ. ಆಶಾ, ಅಂಗನವಾಡಿ, ಬಿಸಿಯೂಟ, ಗ್ರಾಮ ಸಹಾಯಕರು, ಪೌರಕಾರ್ಮಿಕರು ಸೇರಿ ಅಸಂಘಟಿತ ವಲಯದ ಎಲ್ಲರಿಗೂ ನಾವು ಮಾಸಾಶನ ಕೊಡಲು ತೀರ್ಮಾನಿದ್ದೇವೆ ಎಂದರು.
ನಮ್ಮದು ಸೂಕ್ಷ್ಮ ಬಜೆಟ್:ನಾನು ಮಂಡಿಸಿರುವುದು ಒಂದು ರೀತಿಯ ಸೂಕ್ಷ್ಮ ಬಜೆಟ್, ಗಿಡ ಮರ ಪರಿಸರವನ್ನೂ ಗಮನಿಸಿ, ಪ್ರತಿವರ್ಷ ಪರಿಸರ ಎಷ್ಟು ನಷ್ಟವಾಗಲಿದೆ ಎಂದು ಅಧ್ಯಯನ ಮಾಡಿ ಎಕೋ ಬಜೆಟ್ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಪರಿಸರ ಉಳಿಸುವ ಬಜೆಟ್ ನಾವೇ ಮೊದಲು ಮಾಡುತ್ತಿದ್ದೇವೆ, ಇದು ಸರ್ಕಾರದ ಸೂಕ್ಷ್ಮತೆ ತೋರಿಸಲಿದೆ ಎಂದರು.
ಆಸಿಡ್ ದಾಳಿಗೊಳಗಾದವರಿಗೆ ನೀಡುವ ಮಾಸಾಶನ ಮೂರರಿಂದ ಹತ್ತು ಸಾವಿರಕ್ಕೆ ಹೆಚ್ಚಳ, ಕ್ಯಾನ್ಸರ್ ರೋಗಿಗಳ ಕೀಮೋಥೆರಪಿಗೆ 10 ಕೇಂದ್ರ ಹೊಸದಾಗಿ ಆರಂಭ, ಕಡಿಮೆ ದರದಲ್ಲಿ ಕಿಮೋಥೆರಪಿ ಲಭ್ಯ. ಡಯಾಲಿಸಿಸ್ 60 ಸಾವಿರ ಸೈಕಲ್ಗೆ ಹೆಚ್ಚಿಸಿದ್ದೇವೆ, ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ, ಚಿಕಿತ್ಸೆ, ಕನ್ನಡ ವ್ಯವಸ್ಥೆ ಕಲ್ಪಿಸಿದ್ದೇವೆ. ಹುಟ್ಟು ಕಿವುಡರಿಗೆ 500 ಮಕ್ಕಳಿಗೆ ಕೋಕ್ಲಿಯರ್ ಇನ್ ಪ್ಲಾಂಟ್ ಉಪಕರಣ ನೀಡಲು ನಿರ್ಧರಿಸಿದ್ದೇವೆ. ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಗುರುತಿಸಿ ಯೋಜನೆ ನೀಡಿರುವ ಸೂಕ್ಷ್ಮ ಬಜೆಟ್ ನಮ್ಮದಾಗಿದೆ ಎಂದು ಹೇಳಿದರು.
ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಶಿಕ್ಷಣ, ಆರೋಗ್ಯಕ್ಕೆ ಯೋಜನೆ ರೂಪಿಸುವ ಮನವಿ ಪರಿಗಣಿಸಿದ್ದೇವೆ, ವಾಣಿಜ್ಯ ಬಳಕೆ ವಾಹನಗಳ ಚಾಲಕರ ಮಕ್ಕಳಿಗೆ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಕಲ್ಯಾಣ, ಉದ್ಯೋಗಕ್ಕೆ ಆಧ್ಯತೆ ನೀಡಿದ್ದೇನೆ. ಕಲ್ಯಾಣ ಕರ್ನಾಟಕಕ್ಕೆ ಘೋಷಣೆ ಮಾಡಿದಂತೆ 3 ಸಾವಿರ ಕೋಟಿ ಕೊಟ್ಟಿದ್ದೇನೆ, ಶಿಕ್ಷಣಕ್ಕೆ 500 ಕೋಟಿ ಕೊಟ್ಟಿದ್ದೇನೆ, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡುವುದು ನಮ್ಮ ಗುರಿ ಎಂದರು.
ಇದನ್ನೂ ಓದಿ:ಒಂದೇ ಹಳಿ ಮೇಲೆ ರೈಲುಗಳು ಮುಖಾಮುಖಿ ಬಂದರೂ ಹೊಡೆಯಲ್ಲ ಡಿಕ್ಕಿ.. ಇದೆಂಥ ಅಚ್ಚರಿ!