ಬೆಂಗಳೂರು:ಬೆಂಗಳೂರಿನ ಕೆಆರ್ ಪುರದಲ್ಲಿ ಮೂರನೇ ದಿನವೂ ತೆರವು ಕಾರ್ಯಾಚರಣೆ ಮುಂದುವರೆದಿದೆ. ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಮನೆ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ ಘಟನೆ ಬಸವನಪುರ ಮುಖ್ಯರಸ್ತೆಯ ಎಸ್.ಆರ್.ಲೇಔಟ್ನಲ್ಲಿ ನಡೆದಿದೆ.
ಕೈಯಲ್ಲಿ ಪೆಟ್ರೋಲ್ ಹಿಡಿದು ಬಿಬಿಎಂಪಿ ಅಧಿಕಾರಿಗಳಿಗೆ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ನಾವು ಇಲ್ಲಿಯವರೇ, ಇಲ್ಲಿ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು ?. ನಾವೇನು ಪಾಕಿಸ್ತಾನದಿಂದ ಬಂದವರಾ?, ನಾವೂ ಕರ್ನಾಟಕದ ಜನರೇ. ನಮಗೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಇಷ್ಟೊಂದು ತೊಂದರೆ ಕೊಡ್ತಿದ್ದಾರೆ ಎಂದು ದಂಪತಿ ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ ದಂಪತಿ ಸಿಎಂ ಬರಬೇಕೆಂದು ಪಟ್ಟು:ನಮ್ಮ ಮನೆ ತೆರವು ಮಾಡಿದರೆ ಮೈಮೇಲೆ ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ತಲೆನೋವು ತಂದಿಟ್ಟಿದ್ದರು. ಅಲ್ಲದೇ ಸ್ಥಳಕ್ಕೆ ಸಿಎಂ ಬರಬೇಕು ಎಂದು ಪಟ್ಟು ಹಿಡಿದಿದ್ದರು. ನಾವು ಮನೆಯನ್ನ 40 ಲಕ್ಷ ಲೋನ್ನಲ್ಲಿ ಕಟ್ಟಿದ್ದೇವೆ, ನಮ್ಮ ಮನೆಯನ್ನು ಯಾವುದೇ ಕಾರಣಕ್ಕೂ ಒಡೆಯಕ್ಕೆ ಬಿಡಲ್ಲ ಎಂದು ದಂಪತಿ ಪಟ್ಟು ಹಿಡಿದಿದ್ದರು.
ತೆರವು ಮಾಡದಂತೆ ಆಕ್ರೋಶ: ಸೋನಾ ಮತ್ತು ಸುನೀಲ್ ಎಂಬ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಧಿಕಾರಿಗಳು ಜೆಸಿಬಿ ಮೂಲಕ ಮನೆಯನ್ನು ಕೆಡವಲು ಮುಂದಾದಾಗ ಈ ದಂಪತಿಯು ಮನೆಯನ್ನು ತೆರವು ಮಾಡದಂತೆ ಅಡ್ಡಿಪಡಿಸಿದರು. ಅಧಿಕಾರಿಗಳ ಮತ್ತು ಪೊಲೀಸರ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಸುಸೈಡ್ ಮಾಡಿಕೊಳ್ಳಲು ಯತ್ನಿಸಿ ಅಧಿಕಾರಿಗಳಿಗೆ ಶಾಕ್ ಕೊಟ್ಟರು. ನಂತರ ಪೊಲೀಸರು ಮತ್ತು ಅಧಿಕಾರಿಗಳು ತಕ್ಷಣ ಅಲರ್ಟ್ ಆಗಿ ದಂಪತಿಯ ಮೇಲೆ ನೀರು ಹಾಕಿ ರಕ್ಷಣೆ ಮಾಡಿದರು.
ಸ್ಥಳಕ್ಕೆ ಹಿರಿಯ ಪೊಲೀಸರು ದೌಡು:ಸ್ಥಳಕ್ಕೆ ಬಂದ ಕೆಆರ್ ಪುರ ಎಸಿಪಿ ಶಾಂತಮಲ್ಲಪ್ಪ, ದಂಪತಿಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಎಸಿಪಿ ಮಾತಿಗೂ ಬಗ್ಗದೆ ಪ್ರತಿಭಟನೆ ಮುಂದುವರೆಸಿದರು.
ಇದನ್ನೂ ಓದಿ:ಮುಂದುವರಿದ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್
ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ನಿನ್ನೆಯಿಂದಲೂ ದಂಪತಿ ಇದೇ ರೀತಿ ಮಾಡ್ತಿದ್ದಾರೆ. ಕಾನೂನಿನಲ್ಲಿ ಸೆಂಟಿಮೆಂಟ್ಗೆ ಅವಕಾಶ ಇಲ್ಲ. ಮಳೆ ಬಂದು ಇಲ್ಲಿ ಮಗು ಕೂಡ ಕೊಚ್ಚಿಹೋಗಿತ್ತು. ಹೀಗಾಗಿ ರಾಜಕಾಲುವೆ ಮಾಡಲೇಬೇಕು. ಅವರು ಈ ರೀತಿ ಮಾಡ್ಬಾರ್ದು, ಅವರ ಮನೆ ಬಿಡೋಕೆ ಸಾಧ್ಯವಿಲ್ಲ. ಒಂದು ಮನೆ ಬಿಟ್ರೆ ಬೇರೆಯವ್ರು ಸುಮ್ಮನಿರ್ತಾರಾ?. ಸದ್ಯಕ್ಕೆ ಅವ್ರನ್ನ ಅಲ್ಲಿಂದ ಕರೆತರಲು ಪ್ರಯತ್ನ ಮಾಡ್ತಿದ್ದೀವಿ, ಬಳಿಕ ಕಾರ್ಯಾಚರಣೆ ಮಾಡುತ್ತೀವಿ ಎಂದು ಹೇಳಿದರು.