ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ಗೆ ಬಿಜೆಪಿ ಅವಧಿಯಲ್ಲಿ ಸಾಕಷ್ಟು ತೊಡಕುಗಳು ಎದುರಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಮಧ್ಯೆಯೇ, ಇದೀಗ ನಗರದ ನಾಯಂಡಹಳ್ಳಿಯ ಇಂದಿರಾ ಕ್ಯಾಂಟೀನ್ ಅಡುಗೆ ಮನೆ ತೆರವುಗೊಳಿಸುವಂತೆ ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಅಡುಗೆ ಮನೆ ಪಾತ್ರೆಗಳನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ. ಆದ್ರೆ, ಪರ್ಯಾಯ ಕಿಚನ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡದೆ ತೆರವು ಮಾಡುತ್ತಿರೋದ್ರಿಂದ ಕ್ಯಾಂಟೀನ್ಗೆ ಆಹಾರ ಪೂರೈಕೆ ಸಮಸ್ಯೆಯಾಗಲಿದೆ ಎಂದು ಚೆಫ್ ಟಾಕ್ ಗುತ್ತಿಗೆದಾರ ಗೋವಿಂದ ಪೂಜಾರಿ ತಿಳಿಸಿದ್ದಾರೆ.
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಬಿಬಿಎಂಪಿ ಆಡಳಿತ ಪಕ್ಷವೂ ಬಿಜೆಪಿಯೇ ಆಗಿರೋದ್ರಿಂದ ಸಚಿವರ ನಡೆಗೆ ಮೇಯರ್ ಗೌತಮ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ಕಿಚನ್ ಇರುವ ಜಾಗ ಕೊಳಚೆ ನಿರ್ಮೂಲನ ಮಂಡಳಿಗೆ ಒಳಪಟ್ಟಿದ್ದು, ಉತ್ತಮ ಯೋಜನೆಗಳನ್ನು ಜಾರಿ ಮಾಡಲು ಆ ಜಾಗ ಕೇಳುತ್ತಿರುವುದು ತಪ್ಪಲ್ಲ. ಹೆರಿಗೆ ಆಸ್ಪತ್ರೆ ಕಟ್ಟುವ ಯೋಜನೆ ಇದೆ. ಸಚಿವ ವಿ. ಸೋಮಣ್ಣ ಕ್ಷೇತ್ರದ ವ್ಯಾಪ್ತಿಯಲ್ಲಿ ಆಸ್ಪತ್ರೆ ಬರಲಿರುವುದರಿಂದ ಜನರ ಬೇಡಿಕೆಗೆ ಸಚಿವರು ಸ್ಪಂದಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ದೀಪಾಂಜಲಿ ನಗರದಲ್ಲಿ ಬದಲಿ ಕಿಚನ್ ನಿರ್ಮಾಣವಾಗಿದೆ. ನೋಟಿಸ್ ಕೊಟ್ಟ ಸಂದರ್ಭದಲ್ಲೇ ಬೇರೆ ವ್ಯವಸ್ಥೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ರೆ ಗುತ್ತಿಗೆದಾರರು ಮಾತ್ರ, ಆರಂಭದ ಒಪ್ಪಂದದ ಪ್ರಕಾರ 15 ಅಡುಗೆ ಮನೆ ಕೊಡುತ್ತೇವೆ ಎಂದಿದ್ದರು. ಬಳಿಕ ಎಂಟು ಮಾತ್ರ ನಿರ್ಮಾಣವಾದವು. ಈಗ ಎಂಟರಲ್ಲಿ ಇನ್ನೂ ಒಂದು ತೆರವು ಮಾಡ್ತಿರೋದ್ರಿಂದ ಊಟ ತಿಂಡಿ ಪೂರೈಕೆಗೆ ಸಮಸ್ಯೆ ಆಗಲಿದೆ. ದೂರ ದೂರದ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆಯ ವೆಚ್ಚ ಹೆಚ್ಚಾಗಲಿದೆ ಮಾಹಿತಿ ನೀಡಿದ್ದಾರೆ.