ಬೆಂಗಳೂರು:ಹಾಸನ ಕೆಎಸ್ಆರ್ಪಿ ಕಮಾಂಡೆಂಟ್ನಲ್ಲಿ ಅವ್ಯವಹಾರ ನಡೆದಿರುವ ಪ್ರಕರಣ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದ್ದು, ಇದನ್ನು ಸಿಐಡಿ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಸನ ಕೆಎಸ್ಆರ್ಪಿ ಕಮಾಂಡೆಂಟ್ನಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಆಗಿದೆ ಎಂಬ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದರು.
ಮಹಾರಾಷ್ಟ್ರದಿಂದ ಕಳ್ಳ ಮಾರ್ಗದಲ್ಲಿ ರಾಜ್ಯಕ್ಕೆ ನುಸುಳುವಿಕೆ ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಬೇರೆ ರಾಜ್ಯಗಳಿಂದ ಸಂಪರ್ಕ ಇರುವ ಕಳ್ಳಮಾರ್ಗಗಳಿಗೆ ನಿರ್ಬಂಧ ಹಾಕಲು ಸೂಚಿಸಲಾಗಿದೆ. ಅಂತಾರಾಜ್ಯ, ಜಿಲ್ಲೆ ಮತ್ತು ಅಂತರ್ ತಾಲೂಕು ಚೆಕ್ ಪೋಸ್ಟ್ಗಳನ್ನು ಗಡಿ ಭಾಗಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಎಲ್ಲಾ ಕಳ್ಳಮಾರ್ಗಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದರು.
ಕೆಳಹಂತದ ಪೊಲೀಸರಿಗೆ ಕೊರೊನಾ ಆತಂಕ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ, ಕೆಳಹಂತದ ಪೊಲೀಸರ ಸುರಕ್ಷತೆ ಕುರಿತಂತೆ ಆಯಾ ಜಿಲ್ಲೆಗಳ ಎಸ್ಪಿಗಳು ಈ ಸಂಬಂಧ ಕ್ರಮ ಕೈಗೊಳ್ಳುತ್ತಾರೆ. ಮುಂಚೂಣಿಯಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಮಾಸ್ಕ್ ಹಾಗು ಸ್ಯಾನಿಟೈಸರ್ ಒದಗಿಸುವಂತೆ ಆದೇಶಿಸಿದ್ದೇನೆ. ಕ್ವಾರಂಟೈನ್ ನಿಗಾದಲ್ಲಿರುವವರು, ಹೆದ್ದಾರಿಗಳಲ್ಲಿ ನಿಯೋಜನೆಗೊಂಡಿರುವ ಎಲ್ಲಾ ಪೊಲೀಸರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸುವಂತೆಯೂ ಆದೇಶ ನೀಡಲಾಗಿದೆ. ಇದಕ್ಕಾಗಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.