ಬೆಂಗಳೂರು :ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ವಿಚಾರ ಈಗಾಗಲೇ ಆತಂಕ ಹುಟ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಪ್ರಕರಣಗಳ ಏರಿಕೆಯಿಂದ ತಿಳಿಯುತ್ತಿದೆ.
ಕಳೆದ ಐದು ದಿನದ ಕೊರೊನಾ ವರದಿಯಲ್ಲಿ 200ಕ್ಕೂ ಅಧಿಕ ಮಕ್ಕಳಲ್ಲಿ ಸೋಂಕು ಕಾಣಿಸಿದೆ. ಆಗಸ್ಟ್ 6 ರಿಂದ 10ರ ಐದು ದಿನಗಳ ಅವಧಿಯಲ್ಲಿ 242 ಮಕ್ಕಳಲ್ಲಿ ವೈರಸ್ ಕಾಣಿಸಿದೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷದವರೆಗಿನ 106 ಮಕ್ಕಳಿಗೆ ಹಾಗೂ 10 ವರ್ಷದಿಂದ 19 ವರ್ಷದೊಳಗಿನ 136 ಮಕ್ಕಳಲ್ಲಿ ಸೋಂಕು ಕಾಣಿಸಿದೆ. ಕಳೆದ ಐದು ದಿನದಲ್ಲಿ ನಗರದಲ್ಲಿ 242 ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್, ನಗರದಲ್ಲಿ ಕೆಲವು ದಿನ ಒಟ್ಟು 350, ಇನ್ನು ಕೆಲವು ದಿನ 450 ಕೋವಿಡ್ ಸೋಂಕು ದೃಢಪಡುತ್ತಿದೆ. ಐದಾರು ಸಾವಿರ ಆ್ಯಕ್ಟೀವ್ ಪ್ರಕರಣಗಳಿವೆ. ಈ ಪೈಕಿ ಮಕ್ಕಳ ಸೋಂಕು ಇದೆ. ಇದರ ಪ್ರಮಾಣ ನೋಡಿದರೂ, ಶೇ. 5ಕ್ಕಿಂತ ಕಡಿಮೆ ಇದೆ.
ಪ್ರಮುಖವಾಗಿ ಎಷ್ಟು ಸೋಂಕು ಎಂಬುದು ನೋಡಬಾರದು. ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂಬುದು ಮುಖ್ಯವಾಗುತ್ತದೆ. ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಿದ್ದರೆ, ನಾವು ಹೆಚ್ಚಿನ ಕ್ರಮಕೈಗೊಳ್ಳಬೇಕಾಗುತ್ತದೆ. ಮಕ್ಕಳ ಆಸ್ಪತ್ರೆಗಳ ಅಂಕಿ-ಸಂಖ್ಯೆಗಳನ್ನು ನೋಡಿದರೆ ಆಮ್ಲಜನಕ ಬೆಡ್‌ಗಳಲ್ಲಿ ಮಕ್ಕಳು ದಾಖಲಾಗುವುದು ತೀರ ಕಡಿಮೆ.