ಕರ್ನಾಟಕ

karnataka

ETV Bharat / state

ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿದ ಬಾಲ ಪ್ರತಿಭೆ: ಗಣ್ಯರ ಪ್ರಶಂಸೆಗೆ ಪಾತ್ರವಾದ ಬಾಲಕಿ - ಭಗವದ್ಗೀತೆಯ ಶ್ಲೋಕ ಕಂಠಪಾಠ

ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿರುವ ಬಾಲ ಪ್ರತಿಭೆ ವೈನವಿ ಅಪರೂಪದ ಸಾಧನೆ ಮಾಡಿದ್ದಾಳೆ.

Bhagavad Gita  Child prodigy  ಭಗವದ್ಗೀತೆಯ ಶ್ಲೋಕ ಕಂಠಪಾಠ  ಬಾಲ ಪ್ರತಿಭೆ ವೈನವಿ
ಗಣ್ಯರ ಪ್ರಶಂಸೆಗೆ ಪಾತ್ರವಾದ ಬಾಲಕಿ ವೈನವಿ

By ETV Bharat Karnataka Team

Published : Jan 9, 2024, 9:34 PM IST

ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿದ ಬಾಲ ಪ್ರತಿಭೆ: ಗಣ್ಯರ ಪ್ರಶಂಸೆಗೆ ಪಾತ್ರವಾದ ಬಾಲಕಿ ವೈನವಿ

ಬೆಂಗಳೂರು:ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿರುವ ಬಾಲಕಿ ವೈನವಿ ವಿಭಿನ್ನ ಸಾಧನೆ ಮಾಡಿದ್ದಾಳೆ. ಮೂಲತಃ ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದ ಮೇಘನಾ ಮತ್ತು ಚನ್ನಮೂರ್ತಿ ಅವರ ಕಿರಿಯ ಪುತ್ರಿ ಬಿ ಸಿ ವೈನವಿ ಹಿಂದೂ ಸಂಸ್ಕೃತಿಯ ಅಪ್ಪಟ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.

2014ರಲ್ಲಿ ಜನಿಸಿರುವ ಬಾಲಕಿ ವೈನವಿ ತನ್ನ ಐದನೇ ವಯಸ್ಸಿಗೆ ಕೇವಲ ಆರು ತಿಂಗಳಿನಲ್ಲಿ (2020ರ ಮಾರ್ಚ್​ನಿಂದ ಸೆಪ್ಟೆಂಬರ್ ನಡುವೆ) ಭಗವದ್ಗೀತೆಯ ಎಲ್ಲ ಹದಿನೆಂಟು ಅಧ್ಯಾಯಗಳ 700 ಶ್ಲೋಕಗಳನ್ನು ಸಂಪೂರ್ಣ, ಸ್ಪಷ್ಟವಾಗಿ ಕಂಠಸ್ತ ಮಾಡಿಕೊಂಡಿದ್ದಾಳೆ. ಅದಲ್ಲದೇ ಹಿಂದೂ ಸಂಸ್ಕೃತಿಯ ಇನ್ನಿತರ ಶ್ಲೋಕಗಳು, ಸ್ತೋತ್ರಗಳು, ದೇವರ ನಾಮಗಳನ್ನು ಸಹ ಕಲಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸೇರಿದ ವೈನವಿಯ ಸಾಧನೆ

ಬೆಂಗಳೂರು ಮಲ್ಲೇಶ್ವರದ ಕ್ಲೂನಿ ಕಾನ್ವೆಂಟ್ ಸ್ಕೂಲ್​ನಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿರುವ ಈ ಬಾಲಕಿ 2020ರಿಂದ ಈವರೆಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಮಠ ಮಾನ್ಯಗಳ ವೇದಿಕೆಗಳಲ್ಲಿ ತನ್ನ ಕಲಿಕಾ ಸಾಮರ್ಥ್ಯವನ್ನು ಸಾಬೀತು ಪಡಿಸುವ ಮೂಲಕ ಗಣ್ಯರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿದ ಬಾಲ ಪ್ರತಿಭೆ

2021ರಲ್ಲಿಯೇ ಬಾಲಕಿಯ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಾವಿನ್ಯತೆ ಹಾಗೂ ತಾರ್ಕಿಕ ವಿಭಾಗದ ಅಡಿ ಬಾಲ ಪುರಸ್ಕಾರ, ನಗದು ಪ್ರೋತ್ಸಾಹ ಧನ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗಣ್ಯರ ಪ್ರಶಂಸೆಗೆ ಪಾತ್ರವಾದ ಬಾಲಕಿ ವೈನವಿ

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ, ಐದು ನಿಮಿಷಗಳಲ್ಲಿ ಭಗವದ್ಗೀತೆಯ ಮೂರು ಅಧ್ಯಾಯಗಳ ಅರವತ್ತು ಶ್ಲೋಕಗಳನ್ನು ಸ್ಪುಟವಾಗಿ ಶರವೇಗದಲ್ಲಿ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಪಡೆದುಕೊಂಡಿದ್ದಾಳೆ. ನಂತರ ಒಂದು ತಿಂಗಳ ಅಂತರದಲ್ಲಿ, ತನ್ನ ಅದ್ಭುತ ಜ್ಞಾನ ಹಾಗೂ ನೆನಪಿನ ಶಕ್ತಿಯಿಂದ ಹಲವು ರೀತಿಯ ವಿಶಿಷ್ಟ ಕಲಿಕಾ ಸಾಮರ್ಥ್ಯಕ್ಕೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಗುರುತಿಸಿ ಗೌರವಿಸಿದೆ. ಅದೇ ರೀತಿಯಲ್ಲಿ 2022ರ ಅಕ್ಟೋಬರ್​ನಲ್ಲಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಪುರಸ್ಕಾರಕ್ಕೆ ಬಾಲ ಪ್ರತಿಭೆ ವೈನವಿ ಪಾತ್ರವಾಗಿದ್ದಾಳೆ.

ಮೈಸೂರಿನ ಅವಧೂತ ದತ್ತಪೀಠ ಶ್ರೀ ಸಚ್ಚಿದಾನಂದ ಆಶ್ರಮದಿಂದ ನಾಲ್ಕು ತಿಂಗಳ ಕಾಲ ಭಗವದ್ಗೀತಾ ಶ್ಲೋಕಗಳನ್ನು ಕಲಿಯುವ ಶಿಕ್ಷಣಾರ್ಥಿಗಳಿಗೆ ಹಾಗೂ ಸಂಪೂರ್ಣ ಕಲಿತವರಿಗೆ ಹಮ್ಮಿಕೊಳ್ಳಲಾಗಿದ್ದ ಆನ್​ಲೈನ್ ತರಗತಿಗಳಿಗೆ ಸೇರ್ಪಡೆಗೊಂಡವರಿಗೆ 2022ರ ಏಪ್ರಿಲ್​ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ವೈನವಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಸ್ವಾಮೀಜಿಯ 80ನೇ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಹಾಗೂ ಚಿನ್ನದ ಪದಕ ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳುತ್ತಾರೆ ವೈನವಿ ಪೋಷಕರು.

ಭಗವದ್ಗೀತೆಯ ಶ್ಲೋಕಗಳನ್ನು ಸಂಪೂರ್ಣ ಕಂಠಪಾಠ ಮಾಡಿದವರಿಗೆ ಸೆಪ್ಟೆಂಬರ್ 2023ರಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ಜರುಗಿದ ಕಂಠಪಾಠ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈ ಮೂಲಕ ದೊಡ್ಡ ಮೊತ್ತದ ನಗದು ಪುರಸ್ಕಾರ ಹಾಗೂ ಮಂತ್ರಾಕ್ಷತೆ ಆಶೀರ್ವಾದ ಪಡೆದುಕೊಂಡಿದ್ದಾಳೆ. ಭಗವದ್ಗೀತೆ ಶ್ಲೋಕಗಳ ಕಲೆಯನ್ನು ಕರಗತ ಮಾಡಿಕೊಂಡಿರುವ ಬಾಲಕಿಗೆ ಐಎಎಸ್ ಅಧಿಕಾರಿ ಆಗಬೇಕೆಂಬ ಮಹದಾಕಾಂಕ್ಷೆ ಇದೆ.

ಇದನ್ನೂ ಓದಿ:ಷಟ್ಲರ್​ ಸಾಚಿ ಜೋಡಿಗೆ ಖೇಲ್ ರತ್ನ: ಶಮಿ, ಶೀತಲ್ ದೇವಿ ಸೇರಿ 26 ಸಾಧಕರಿಗೆ ಅರ್ಜುನ ಪ್ರಶಸ್ತಿ ಪ್ರದಾನ

ABOUT THE AUTHOR

...view details