ಬೆಂಗಳೂರು : ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ರೇಸ್ ಕೋರ್ಸ್ ಬಳಿಯ ಶಕ್ತಿಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಕ್ಕಿ ಪೂರೈಕೆ ಸಂಬಂಧ ನಾನೇ ತೆಲಂಗಾಣ ಸಿಎಂ ಜತೆ ಮಾತನಾಡಿದ್ದೇನೆ. ಆದರೆ ಅಲ್ಲಿ ಅಕ್ಕಿ ಸಿಕ್ತಾ ಇಲ್ಲ. ಇನ್ನು ಆಂಧ್ರ ಪ್ರದೇಶ ಜತೆ ನಮ್ಮ ಮುಖ್ಯ ಕಾರ್ಯದರ್ಶಿಗೆ ಮಾತುಕತೆ ನಡೆಸಲು ಹೇಳಿದ್ದೇನೆ ಎಂದು ತಿಳಿಸಿದರು.
ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಛತ್ತೀಸ್ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿ ಇದೆ. ಇದರಿಂದಾಗಿ ಸಾಗಣೆ ವೆಚ್ಚವೂ ಜಾಸ್ತಿಯಾಗಲಿದೆ. ಈ ಬಗ್ಗೆ ಇಂದು ಸಂಜೆ ಸಭೆ ಮಾಡುತ್ತೇವೆ. ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ಬಳಿಕ ಮಾಹಿತಿ ನೀಡುತ್ತೇವೆ ಎಂದರು.
ಕಮಿಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಅಕ್ಕಿ ಸಿಗುವುದಾದರೆ ವಿಜಯೇಂದ್ರ ಕೊಡಿಸಲಿ. ಈ ರೀತಿ ಹೇಳಿಕೆ ನೀಡುತ್ತಾರಲ್ಲ ವಿಜಯೇಂದ್ರ ಅವರ ಮಿಲ್ನಲ್ಲಿ ಅಕ್ಕಿ ಇದೆಯಾ?. ಸುಮ್ನೆ ಮಾತನಾಡ್ತಾರೆ ಎಂದು ಸಿಎಂ ತಿರುಗೇಟು ನೀಡಿದರು.
ಛತ್ತೀಸ್ಗಢ ಸಕಾರಾತ್ಮಕವಾಗಿದೆ : ಶಕ್ತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಆಹಾರ ಸಚಿವ ಕೆ. ಎಚ್. ಮುನಿಯಪ್ಪ, ಛತ್ತೀಸ್ಗಢ ಸರ್ಕಾರ ಸಕಾರಾತ್ಮಕವಾಗಿದೆ. ಅಕ್ಕಿಯನ್ನು ಕೊಡಬೇಕು ಎಂದು ಸಿಎಂ, ಡಿಸಿಎಂ ಜೊತೆ ಸೇರಿ ನಿರ್ಧಾರ ಮಾಡಿದ್ದೆವು. ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿದೆ. ಕೇಂದ್ರ ಸರ್ಕಾರದಲ್ಲಿ ಅಕ್ಕಿ ಇದ್ದರೂ ರಾಜ್ಯಕ್ಕೆ ನೀಡದೇ ರಾಜಕೀಯ ಮಾಡಿದ್ದಾರೆ. ನಮ್ಮದೇ ರೀತಿಯಲ್ಲಿ ರಾಜ್ಯಕ್ಕೆ ಬೇಕಾದ ಅಕ್ಕಿಯನ್ನು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಇನ್ನು, ಛತ್ತೀಸ್ಗಢ ನಮ್ಮ ಅಧಿಕಾರಿಗಳ ತಂಡ ಕೂಡ ಸಂಪರ್ಕದಲ್ಲಿದೆ. ನಾಳೆ ಒಳಗೆ ಈ ಬಗ್ಗೆ ಅಂತಿಮವಾಗುತ್ತದೆ. ಅಕ್ಕಿ ಕೊಡುವುದಂತೂ ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ಉಚಿತ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ: ಉಚಿತ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಹಿಂದೆ ಡೆಪ್ಯುಟಿ ಮ್ಯಾನೇಜರ್ 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ಹೇಳಿದ್ದರು. ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಯಾಕೆ ಪೂರೈಕೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಅಕ್ಕಿ ಪೂರೈಸಲು ಛತ್ತೀಸ್ಗಢ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಈಗಾಗಲೇ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಮಾತನಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮೊನ್ನೆ ತಿಳಿಸಿದ್ದರು.
ಇದನ್ನೂ ಓದಿ :ಇಂದಿರಾ ಕ್ಯಾಂಟೀನ್ನಲ್ಲಿ ಹೊರಗಡೆಯಿಂದ ಮಾಂಸ ತಂದು ತಿನ್ನಬಹುದು, ಆದರೆ ಪೂರೈಕೆ ಇಲ್ಲ: ಸಚಿವ ಮಹಾದೇವಪ್ಪ