ಕರ್ನಾಟಕ

karnataka

By

Published : Mar 26, 2022, 10:11 PM IST

Updated : Mar 26, 2022, 10:52 PM IST

ETV Bharat / state

11ವರ್ಷಗಳ ಕಾಲ ಎನರ್ಜಿ ಸ್ವರಾಜ್​ ಯಾತ್ರೆ.. ಬೆಂಗಳೂರಿಗೆ ಬಂದ್ರು ಸೋಲಾರ್ ಗಾಂಧಿ

ಎನರ್ಜಿ ಸ್ವರಾಜ್ ಅಭಿಯಾನವನ್ನು ಮಾಡುತ್ತಾ ಸೋಲಾರ್​ ಮೂಲಕ ಮನೆ ಬಳಕೆಯ ದೈನಂದಿನ ವಿದ್ಯುತ್​ ಪಡೆಯಲು ಸಾಧ್ಯ. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ಸಲುವಾಗಿ ಈ ಸೌರಶಕ್ತಿಯ ಬಳಕೆ ಅಗತ್ಯವಾಗಿದೆ ಎಂದು ಸೋಲಾರ್​ ಗಾಂಧಿ ಖ್ಯಾತಿಯ ಪ್ರೊ. ಚೇತನ್​ ಸಿಂಗ್​ ಹೇಳಿದ್ದಾರೆ.

Chetan Singh Solanki
ಸಂಶೋಧಕ ಪ್ರೊ. ಚೇತನ್ ಸಿಂಗ್ ಸೋಲಂಕಿ

ಬೆಂಗಳೂರು: ಸೋಲಾರ್ ಗಾಂಧಿ ಎಂದೇ ಖ್ಯಾತಿ ಪಡೆದಿರುವ ಶಿಕ್ಷಣತಜ್ಞ, ಸಂಶೋಧಕ ಪ್ರೊ. ಚೇತನ್ ಸಿಂಗ್ ಸೋಲಂಕಿ ತಮ್ಮ ಎನರ್ಜಿ ಸ್ವರಾಜ್ ಯಾತ್ರೆಯನ್ನು ಕೈಗೊಂಡಿದ್ದಾರೆ. 11 ವರ್ಷಗಳ ಈ ಯಾತ್ರೆಯು ಮಧ್ಯಪ್ರದೇಶ ರಾಜ್ಯದಿಂದ ಶುರುವಾಗಿದ್ದು, ಹತ್ತಾರು ರಾಜ್ಯಗಳಲ್ಲಿ ಯಾತ್ರೆಯನ್ನು ಮುಗಿಸಿ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಅಂದಹಾಗೇ, ಪ್ರಸ್ತುತ IIT ಬಾಂಬೆಯಿಂದ ವೇತನರಹಿತ ರಜೆಯಲ್ಲಿರುವ ಇವರು ನವೆಂಬರ್ 2020 ರಿಂದ ಸೋಲಾರ್ ಅಳವಡಿಸಿರುವ ಬಸ್ ಮೂಲಕ 2030 ರವರೆಗೆ 11 ವರ್ಷಗಳ ಕಾಲ ಎನರ್ಜಿ ಸ್ವರಾಜ್ ಯಾತ್ರೆಯನ್ನು ಕೈಗೊಂಡಿದ್ದಾರೆ.

ಶೇಕಡಾ 100 ಸೌರಶಕ್ತಿಯನ್ನು ಅಳವಡಿಸಿಕೊಳ್ಳುವತ್ತ ಸಾರ್ವಜನಿಕ ಆಂದೋಲನವನ್ನು ಸೃಷ್ಟಿಸುವ ಉದ್ದೇಶದಿಂದ ಈ ಶಕ್ತಿ ಸ್ವರಾಜ್ ಯಾತ್ರೆಯನ್ನು ವಿನ್ಯಾಸಗೊಳಿಸಲಾಗಿದೆ. ಇವರನ್ನು ಮಧ್ಯಪ್ರದೇಶ ಸರ್ಕಾರವು ಸೌರಶಕ್ತಿಯ ರಾಯಭಾರಿಯಾಗಿ ಗೌರವಿಸಿದೆ. ಗಾಂಧಿಯವರ ಆದರ್ಶಗಳನ್ನು ಅನುಸರಿಸಿರುವ ಸೋಲಂಕಿ 'ಎನರ್ಜಿ ಸ್ವರಾಜ್' ಎಂದು ಕರೆದಿದ್ದಾರೆ.

ಯೋಜನೆಯ ಮೂಲಕ ಅವರು 7.5 ಮಿಲಿಯನ್ ಕುಟುಂಬಗಳನ್ನು ತಲುಪಿದ್ದಾರೆ. 2019 ರ ಅವಧಿಯಲ್ಲಿ ಪ್ರೊಫೆಸರ್ ಸೋಲಂಕಿ ಸೌರಶಕ್ತಿಯ ಸಂದೇಶವನ್ನು ಹರಡಲು ಪ್ರಪಂಚದಾದ್ಯಂತ 30 ದೇಶಗಳನ್ನು ಸುತ್ತಿದರು. ಅವರ ಚಾಲ್ತಿಯಲ್ಲಿರುವ ಎನರ್ಜಿ ಸ್ವರಾಜ್ ಯಾತ್ರೆಯಲ್ಲಿ ಈಗಾಗಲೇ 17,000 ಕಿಲೋಮೀಟರ್‌ಗಳನ್ನು ಪ್ರಯಾಣಿಸಿದ್ದಾರೆ. 7 ರಾಜ್ಯಗಳಲ್ಲಿ 55,000 ಕ್ಕೂ ಹೆಚ್ಚು ಜನರನ್ನು ತಲುಪಿದ್ದಾರೆ. 11 ವರ್ಷಗಳ ಯಾತ್ರೆಯು ದೇಶಾದ್ಯಂತ 5 - 7 ಬಾರಿ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಯಾತ್ರೆಯು 100 ಕೋಟಿಗೂ ಹೆಚ್ಚು ಶಕ್ತಿ ಸಾಕ್ಷರತೆಯನ್ನು ತರಲು ಮತ್ತು 1 ಕೋಟಿ ಕುಟುಂಬಗಳನ್ನು ಸೌರಶಕ್ತಿಯ ಮೇಲೆ 100% ಬದಲಾಯಿಸಲು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಕುರಿತು ಮಾತಾನಾಡಿರುವ ಪ್ರೊ. ಚೇತನ್ ಸಿಂಗ್ ಸೋಲಂಕಿ, ದಿನೇ‌ ದಿನೇ ನಮ್ಮ ವಾತಾವರಣದಲ್ಲಿ ಬದಲಾವಣೆ ಆಗ್ತಿದ್ದು ತಾಪಮಾನ ಹೆಚ್ಚಾಗ್ತಿದೆ. ಅದನ್ನ ತಗ್ಗಿಸಲು ಸಾಧ್ಯವಾದಷ್ಟು ಸೋಲಾರ್ ಬಳಕೆ ಮಾಡುವುದು ಉತ್ತಮ. ಬಸ್‌ನಲ್ಲಿ 3.2 kW ಸೌರ ಫಲಕಗಳು ಮತ್ತು 6 kWh ಬ್ಯಾಟರಿ ಸಂಗ್ರಹಣೆಯನ್ನು ಅಳವಡಿಸಲಾಗಿದೆ. ಇದು 3 kVa ಇನ್ವರ್ಟರ್ ಅನ್ನು ಹೊಂದಿದೆ. ಬಸ್ಸಿನೊಳಗೆ ಲೈಟ್‌ಗಳು, ಕೂಲರ್, ಅಡುಗೆ ಒಲೆ, ಟಿವಿ, ಎಸಿ, ಲ್ಯಾಪ್‌ಟಾಪ್ ಚಾರ್ಜಿಂಗ್ ಎಲ್ಲವೂ ಸೌರಶಕ್ತಿ ಚಾಲಿತ ಯಂತ್ರದಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಐಐಎಸ್ಸಿಯ ಪ್ರೊ. ಎಸ್ ದಾಸಪ್ಪ ಮಾತನಾಡಿ, ಸೋಲಂಕಿಯವರು ಮಧ್ಯಪ್ರದೇಶದಿಂದ ಶುರು ಮಾಡಿರುವ ಎನರ್ಜಿ ಯಾತ್ರಾದಲ್ಲಿ ಜನರಿಗೆ ತಿಳುವಳಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ. 17,000 ಕಿ.ಮೀ ಓಡಾಟ ಮಾಡುತ್ತಿದ್ದು, ಬಸ್ಸಿನಲ್ಲೇ ಜೀವನ ಕಳೆಯೋದರ ಜೊತೆಗೆ ತರಬೇತಿ ಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ದೈನಂದಿನ ಬಳಕೆಯ ಸೋಲಾರ್​ ಎನರ್ಜಿಯನ್ನು ಬಸ್ಸಿನ ಚಾವಣಿಯಷ್ಟು ಪ್ಯಾನಲ್​ಗಳಲ್ಲೇ ಪಡೆಯಬಹುದು ಎಂದು ತಿಳಿಸಿಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ:ಏಪ್ರಿಲ್ 1ರೊಳಗೆ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ

Last Updated : Mar 26, 2022, 10:52 PM IST

ABOUT THE AUTHOR

...view details