ಬೆಂಗಳೂರು:ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಮಕ್ಕಳಿಂದ ಹಿಡಿದು ವಯೋವೃದ್ದರೂ ಇಷ್ಟಪಡುವ ಐಸ್ ಕ್ರೀಂ ತಯಾರಿಕೆಯಲ್ಲಿ ವಿವಿಧ ರಾಸಾಯನಿಕಗಳನ್ನು ಬಳಸುವುದು ಗೊತ್ತೇ ಇದೆ. ಇಂತಹ ಐಸ್ ಕ್ರೀಂ ತಿಂದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಗ್ಯಾರಂಟಿ. ಹಾಗಾದರೆ ಆರೋಗ್ಯ ಕಾಪಾಡುವ ಐಸ್ ಕ್ರೀಂ ಸಿಗಲಿದೆಯೇ ಎಂಬ ಪ್ರಶ್ನೆ ಕೇಳಿದರೆ ಸಿರಿಧಾನ್ಯಗಳಿಂದ ಬಳಸಿದ ಐಸ್ ಕ್ರೀಂ ಇದಕ್ಕೆ ಉತ್ತರ.
ಜೋಳ, ನವಣೆ, ಸಜ್ಜೆ ಹಾಗೂ ರಾಗಿ ಬಳಸಿ ಮೊದಲ ಬಾರಿಗೆ ಲಿಕಿ ಕಂಪನಿಯು ಸಿರಿಧಾನ್ಯ ಐಸ್ ಕ್ರೀಂ ತಯಾರಿಸಿದೆ. ಸಿರಿಧಾನ್ಯ, ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಬಂದ ಜನರು ಐಸ್ ಕ್ರೀಂ ಚಪ್ಪರಿಸಿ ಸೇವಿಸುತ್ತಿದ್ದಾರೆ. ಡೈರಿ-ಮುಕ್ತ ಸಿರಿಧಾನ್ಯ ಪೌಷ್ಟಿಕರಿಸಿದ ಐಸ್ ಕ್ರೀಂಗೆ ಸಂಸ್ಕರಿಸಿದ ಸಿರಿಧಾನ್ಯಗಳ ಹಾಲನ್ನು ಬಳಸಲಾಗಿದೆ. ಕೃತಕ ಫ್ಲೇವರ್ ಇಲ್ಲದೆ ನೈಸರ್ಗಿಕವಾಗಿ ತಯಾರಾದ ಐಸ್ ಕ್ರೀಂ ಇದಾಗಿದೆ.
ಸಂಸ್ಕರಿಸಿದ ಸಿರಿಧಾನ್ಯಗಳನ್ನು ದಲ್ಲಾಳಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ಬೆಂಗಳೂರಿನ ಯಲಚೇನಹಳ್ಳಿ ಜೆ.ಸಿ.ಇಂಡಸ್ಟ್ರಿಯಲ್ ಏರಿಯಾದಲ್ಲಿ ಐಸ್ ಕ್ರೀಂ ತಯಾರಿಸಲಾಗುತ್ತದೆ. ಉತ್ಪನ್ನ ಆರಂಭಕ್ಕೂ ಎರಡು ವರ್ಷಗಳ ಸುದೀರ್ಘ ಅಧ್ಯಯನ ನಡೆಸಿ ವಿಜ್ಞಾನಿಗಳ ಜೊತೆ ಚರ್ಚಿಸಿ ಹಲವು ಬಾರಿ ಸಾಧಕ-ಬಾಧಕಗಳೊಂದಿಗೆ ಅಂತಿಮ ಸಿರಿಧಾನ್ಯ ಐಸ್ ಕ್ರೀಂ ಸಿದ್ದಪಡಿಸಲಾಗಿದೆ.