ಕರ್ನಾಟಕ

karnataka

ETV Bharat / state

ಮೆಟ್ರೋ ಪಿಲ್ಲರ್ ದುರಂತ ಪ್ರಕರಣ; ಐದು ತಿಂಗಳ ಬಳಿಕ ಚಾರ್ಜ್​​​ಶೀಟ್​​ ಸಲ್ಲಿಸಿದ ಪೊಲೀಸರು

ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಹನ್ನೊಂದು ಜನರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ.

ಮೆಟ್ರೋ ಪಿಲ್ಲರ್ ದುರಂತ
ಮೆಟ್ರೋ ಪಿಲ್ಲರ್ ದುರಂತ

By

Published : Jun 23, 2023, 12:03 PM IST

Updated : Jun 23, 2023, 12:11 PM IST

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಮೃತಪಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕೇಸ್​​ನ ತನಿಖೆ ಕೈಗೊಂಡಿದ್ದ ಗೋವಿಂದಪುರ ಠಾಣಾ ಪೊಲೀಸರು ಘಟನೆ ನಡೆದು ಐದು ತಿಂಗಳುಗಳ ಬಳಿಕ ಕನ್ಸ್ಟ್ರಕ್ಷನ್ ಕಂಪನಿ ಇಂಜಿನಿಯರ್ಸ್ ಹಾಗೂ ಬಿಎಂಆರ್​​​ಸಿಎಲ್ ಇಂಜಿನಿಯರ್ಸ್ ಸೇರಿದಂತೆ ಹನ್ನೊಂದು ಜನರ ವಿರುದ್ಧ ನ್ಯಾಯಾಲಯಕ್ಕೆ ಬರೋಬ್ಬರಿ 1,100 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.

ಘಟನಾ ಸ್ಥಳ ಪರಿಶೀಲಿಸಿದ ಐಐಟಿ ತಜ್ಞರ ವರದಿಗಳು, ಎಫ್ಎಸ್ಎಲ್ ವರದಿಯ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು, ಆಯಾ ವರದಿಗಳ ಸಮೇತ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಅವಘಡಕ್ಕೆ ಅಧಿಕಾರಿಗಳ ಲೋಪ, ಹಾಗೂ ಪಿಲ್ಲರ್ ನಿರ್ಮಾಣ ವೇಳೆ ಕೈಗೊಂಡ ಸುರಕ್ಷತಾ ಕ್ರಮಗಳ ವೈಫಲ್ಯ ಕಾರಣವಾಗಿರುವ ಬಗ್ಗೆಯೂ ಚಾರ್ಜ್​ಶೀಟ್​ ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪ್ರಾಜೆಕ್ಟ್ ಡಾಕ್ಯುಮೆಂಟ್​ಗಳನ್ನ ಪರಿಶೀಲನೆ ನಡೆಸಿರುವ ಪೊಲೀಸರು, ಪಿಲ್ಲರ್ ಡಿಸೈನ್ ಹೇಗೆ ಮಾಡಲಾಗಿತ್ತು, ಪರ್ಯಾಯವಾಗಿ ಯಾವ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕಿತ್ತು. ಘಟನೆ ಬಗ್ಗೆ ಐಐಟಿ ರಿಪೋರ್ಟ್ ಮತ್ತು ಬಳಕೆಯಾದ ಮೆಟಿರಿಯಲ್ಸ್ ಬಗ್ಗೆ ಎಫ್ಎಸ್ಎಲ್ ರಿಪೋರ್ಟ್ ನಲ್ಲಿ‌ ಏನಿದೆ ಎಂಬುದನ್ನ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಜನವರಿ 10ರಂದು ಬೆಳಗ್ಗೆ ಎಚ್.ಆರ್.ಬಿ.ಆರ್. ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಹಾಗೂ ಆಕೆಯ ಮೂರು ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಬೈಕಿನಲ್ಲಿದ್ದ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಹಾಗೂ ಮತ್ತೊಂದು ಹೆಣ್ಣು ಮಗು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದರು. ಬಳಿಕ ಮೃತಳ ಪತಿ ಲೋಹಿತ್ ಕುಮಾರ್ ನೀಡಿದ ದೂರಿನ ಅನ್ವಯ ಬಿಎಂಆರ್​​ಸಿಎಲ್​ ಹಾಗೂ ಪಿಲ್ಲರ್ ನಿರ್ಮಾಣದ ಹೊಣೆಗಾರಿಕೆ ಹೊತ್ತಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ ಎಂಟು ಜನ ಅಧಿಕಾರಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿದಂತೆ ಹದಿನೈದು ಅಧಿಕಾರಿಗಳನ್ನ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ:ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ; ವಿಚಾರಣೆಗೆ ಹಾಜರಾದ ಬಿಎಂಆರ್​ಸಿಎಲ್​ ಎಂಡಿ ಅಂಜುಂ ಪರ್ವೇಜ್

ಈ ಪ್ರಕರಣದಲ್ಲಿ ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್​ ಅಮಾನತು ಮಾಡಿತ್ತು. ಅಲ್ಲದೇ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್​ ಲಿಮಿಟೆಡ್​ (BMRCL) ಈ ವಿಷಯವನ್ನು ಸ್ವತಂತ್ರವಾಗಿ ತನಿಖೆ ಮಾಡಲು ಮತ್ತು ವರದಿ ನೀಡಲು ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ಗೆ (IISc) ಗೆ ಮನವಿಯನ್ನು ಮಾಡಿತ್ತು.

ಇದನ್ನೂ ಓದಿ:ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ

ಇದನ್ನೂ ಓದಿ:ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ನಮ್ಮ ಮೆಟ್ರೋ ಸಂಸ್ಥೆಗೆ ವರದಿ ಸಲ್ಲಿಸಿದ ಐಐಎಸ್‌ಸಿ

Last Updated : Jun 23, 2023, 12:11 PM IST

ABOUT THE AUTHOR

...view details