ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ 21ನೇ ಚಿತ್ರಸಂತೆಗೆ ಜನಸಾಗರ ಹರಿದು ಬರುತ್ತಿದೆ. ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಆಯೋಜಿಸಲಾಗಿರುವ ಚಿತ್ರಸಂತೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 1,500 ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಸಾವಿರಾರು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಭಾನುವಾರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಕುಮಾರಕೃಪಾ ರಸ್ತೆ ಹಾಗೂ ಹರೇ ಕೃಷ್ಣ ರಸ್ತೆಯ ಉಕ್ಕಿನ ಕೆಳಸೇತುವೆ ಭಾಗದ ಶಿವಾನಂದ ವೃತ್ತದಿಂದ ಗುರುರಾಜ ಜಂಕ್ಷನ್ ಬಳಿಯ ನವಕರ್ನಾಟಕ ಪಬ್ಲಿಕೇಷನ್ ಕಟ್ಟಡದವರೆಗಿನ ಉತ್ತರ ಭಾಗದ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ರೇಸ್ ವ್ಯೂ ಜಂಕ್ಷನ್ ಮೂಲಕ ಕೆ ಕೆ ರಸ್ತೆ ಪ್ರವೇಶವನ್ನೂ ಸಹ ನಿರ್ಬಂಧಿಸಲಾಗಿದೆ.