ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅವಧಿಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ರೋಡ್ ಶೋ ಶನಿವಾರ ದಿನದಂದು 2 ಹಂತದಲ್ಲಿ ನಿಗದಿಯಾಗಿತ್ತು. ಆದರೆ ಈಗ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ನಡೆಯಲಿದೆ.
ಮೇ 6 ರ ಶನಿವಾರ ಒಂದೇ ದಿನ ನಡೆಯಬೇಕಿದ್ದ ಮೋದಿ ರೋಡ್ ಶೋ ಅನ್ನು ಮಳೆ ಮತ್ತು ಟ್ರಾಫಿಕ್ ಸಮಸ್ಯೆ ಕಾರಣದಿಂದಾಗಿ ಎರಡು ದಿನಕ್ಕೆ ಹೊಂದಾಣಿಕೆ ಮಾಡಲಾಗಿದೆ. ಹೀಗಾಗಿ, ಶನಿವಾರ ಮತ್ತು ಭಾನುವಾರ ಬೆಳಗ್ಗೆ ಪ್ರಧಾನಿ ಮತಬೇಟೆ ನಡೆಸುವರು. ಶನಿವಾರ ಸಂಜೆ ನಿಗದಿಯಾಗಿದ್ದ ಮಾರ್ಗದಲ್ಲೇ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಯಲಿದೆ. ಶನಿವಾರ ಬೆಳಗಿನ ರೋಡ್ ಶೋ ಈಗಾಗಲೇ ನಿರ್ಧಾರವಾದಂತೆಯೇ ಇರಲಿದೆ. ಆದರೆ ಶನಿವಾರ ಸಂಜೆಯ ಬದಲು ರವಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ತನಕ ಬೆಂಗಳೂರು ದಕ್ಷಿಣದಲ್ಲಿ ಮತ ಪ್ರಚಾರ ನಡೆಯಲಿದೆ.
ಶನಿವಾರ ಬೆಳಗ್ಗೆ ಒಟ್ಟು 10.1 ಕಿ.ಮೀ ರೋಡ್ ಶೋ ನಡೆಯಲಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಬರುವ ವಿಧಾನಸಭಾ ಕ್ಷೇತ್ರದ ರೋಡ್ ಶೋ ಸಿವಿ ರಾಮನ್ ನಗರದಿಂದ, ಬ್ರಿಗೇಡ್ ರೋಡ್‌ವರೆಗೂ ನಡೆಯಲಿದೆ. ಭಾನುವಾರ ಬೆಳಗ್ಗೆ 26.5 ಕಿ.ಮೀ ರೋಡ್ ಶೋ ನಡೆಯಲಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದವರೆಗೂ ಚುನಾವಣಾ ಪ್ರಚಾರ ನಡೆಯಲಿದೆ.
23 ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ಹಾದು ಹೋಗಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ. ರ‍್ಯಾಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು, ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಒಟ್ಟು 37 ಕಿ.ಮೀ ರ‍್ಯಾಲಿ ನಡೆಯಲಿದೆ. ನಮ್ಮ ರ‍್ಯಾಲಿ ಭಾರತ್ ಜೋಡೋ ರ‍್ಯಾಲಿಗಿಂತ ವಿಭಿನ್ನವಾಗಿರಲಿದೆ. ಮೋದಿ ಅವರಿಗೆ ಆಶೀರ್ವಾದ ಮಾಡಲು 10 ಲಕ್ಷ ಜನ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
17 ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಆಶಯದೊಂದಿಗೆ ಪ್ರಧಾನಿ ಭೇಟಿ-ಶೋಭಾ ಕರಂದ್ಲಾಜೆ: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೇ 6, 7ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಹೆಸರಿನಲ್ಲಿ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.