ಕರ್ನಾಟಕ

karnataka

ಕೇಂದ್ರದ ಬಜೆಟ್ ಸರ್ಕಾರದ ದಿವಾಳಿತನವನ್ನು ಎತ್ತಿ ತೋರಿಸುತ್ತದೆ: ಯುಟಿ ಖಾದರ್

By

Published : Feb 2, 2021, 3:34 AM IST

ಈ ಬಜೆಟ್​ನಲ್ಲಿ ರಾಜ್ಯಕ್ಕೂ ಸಹ ಯಾವುದೇ ಕೊಡುಗೆ ಸಿಕ್ಕಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಜನವಿರೋಧಿ ಆಗಿದೆ. ಜೊತೆಗೆ ಬಂಡವಾಳಶಾಹಿಗಳಿಗೆ ಶಕ್ತಿ ನೀಡುವಂತಹ ಬಜೆಟ್ ಆಗಿದ್ದು, ಕೇಂದ್ರ ಸರ್ಕಾರ ಈ ಬಜೆಟ್​ಅನ್ನು ಮತ್ತೊಮ್ಮೆ ಮರು ಪರಿಶೀಲಿಸುವ ಅಗತ್ಯವಿದೆ ಎಂದು ಖಾದರ್​ ಅಭಪ್ರಾಯಪಟ್ಟಿದ್ದಾರೆ.

ಯುಟಿ ಖಾದರ್​
ಯುಟಿ ಖಾದರ್​

ಬೆಂಗಳೂರು: ಕೇಂದ್ರ ಸರ್ಕಾರ ಇಂದು ಸಂಪೂರ್ಣ ದಿವಾಳಿ ಸ್ಥಿತಿಯಲ್ಲಿದೆ ಎನ್ನುವುದು ಇಂದಿನ ಬಜೆಟ್ ಮೂಲಕ ಸ್ಪಷ್ಟವಾಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇಂದಿನ ಬಜೆಟ್​ನಲ್ಲಿ ಜನಪರವಾದ ಹಾಗೂ ಜನರಿಗೆ ಬೇಕಾಗುವ ಯಾವುದೇ ಅಂಶಗಳು ಇಲ್ಲ. ಬದಲಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮೂಲಕ ಇನ್ನಷ್ಟು ಹೊರೆ ಹೊರಿಸಿದ್ದಾರೆ. ಇಂಧನ ಬೆಲೆ ಹೆಚ್ಚಿದ ತಕ್ಷಣ ಜನಸಾಮಾನ್ಯರು ಬಳಸುವ ದೈನಂದಿನ ವಸ್ತುಗಳ ಬೆಲೆಯೂ ಸಹಜವಾಗಿ ಏರಿಕೆ ಆಗುತ್ತದೆ. ಸಂಚಾರ ವ್ಯವಸ್ಥೆಯಲ್ಲೂ ಬೆಲೆ ಕೂಡ ಏರಿಕೆ ಆಗಲಿದೆ ಎಂದರು.

ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ದೂರದೃಷ್ಟಿ ಇಲ್ಲದ ಅಧಿಕಾರ ಜನರನ್ನು ಇಂದು ಸಮಸ್ಯೆಗೆ ಒಳಗಾಗುವಂತೆ ಮಾಡಿದೆ. ಈ ಬಜೆಟ್​ನಲ್ಲಿ ರಾಜ್ಯಕ್ಕೂ ಸಹ ಯಾವುದೇ ಕೊಡುಗೆ ಸಿಕ್ಕಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಜನವಿರೋಧಿ ಆಗಿದೆ. ಜೊತೆಗೆ ಬಂಡವಾಳಶಾಹಿಗಳಿಗೆ ಶಕ್ತಿ ನೀಡುವಂತಹ ಬಜೆಟ್ ಆಗಿದ್ದು, ಕೇಂದ್ರ ಸರ್ಕಾರ ಈ ಬಜೆಟ್​ಅನ್ನು ಮತ್ತೊಮ್ಮೆ ಮರು ಪರಿಶೀಲಿಸುವ ಅಗತ್ಯವಿದೆ ಎಂದಿದ್ದಾರೆ.

ರೈತ ವಿರೋಧಿ ಕಾನೂನು:

ರೈತ ವಿರೋಧಿ ಕಾನೂನು ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಇಂದು ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದು ಕೇವಲ ರೈತವಿರೋಧಿ ಮಾತ್ರವಲ್ಲ 130 ಕೋಟಿ ಜನರ ವಿರೋಧಿ ಕಾನೂನು ಕೂಡ ಆಗಿದೆ. ಹೀಗಾಗಿ ಜನ ಇಂದು ರೈತಪರ ಹೋರಾಟಕ್ಕೆ ಕೈ ಜೋಡಿಸುವ ಕಾರ್ಯ ಮಾಡಬೇಕು. ಸರ್ಕಾರದ ಆಡಳಿತ ಯಾವ ರೀತಿ ಸಾಗುತ್ತಿದೆ ಎನ್ನುವುದೇ ಅವರ ಅರಿವಿಗೆ ಬರುತ್ತಿಲ್ಲ. ಆಡಳಿತದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಕರ್ನಾಟಕದಿಂದ 25 ಸಂಸದರನ್ನು ಕಳಿಸಿಕೊಟ್ಟರು ಕೂಡ ನೆರೆ, ಜಿಎಸ್​ಟಿ ಪರಿಹಾರ ಸೇರಿದಂತೆ ಯಾವುದೇ ಸಂದರ್ಭದಲ್ಲಿಯೂ ಸೂಕ್ತ ನ್ಯಾಯ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಈ ನೀತಿಯನ್ನು ಖಂಡಿಸಿ ಜನ ಮುಂದಿನ ದಿನಗಳಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಕೇಂದ್ರ ಸಚಿವರ ಹೇಳಿಕೆಗಳು ಒಂದೊಂದು ಸಾರಿ ಆತಂಕವನ್ನು ಮೂಡಿಸುತ್ತದೆ. ಕೊರೊನಾ ಸಂದರ್ಭದಲ್ಲಿ ಅವರಾಡಿದ ಮಾತು ಅಚ್ಚರಿ ಮೂಡಿಸುತ್ತದೆ. ರೈತರು ಯುವಜನತೆ ಹಾಗೂ ಇತರರನ್ನು ದೃಷ್ಟಿಯಲ್ಲಿಟ್ಟುಕೊಂಡು ದೂರದೃಷ್ಟಿ ಯೋಜನೆಗಳನ್ನು ಜಾರಿಗೊಳಿಸಿದೇ ಹೋದರೆ ಸಮಸ್ಯೆ ಹೆಚ್ಚಾಗಲಿದೆ. ಕೇವಲ ಕೊರೊನಾ ಹೆಸರಿನಲ್ಲಿ ಉಳಿದೆಲ್ಲವನ್ನೂ ಮರೆಯುವುದು ಸರಿಯಲ್ಲ. ಅಲ್ಲದೆ ಈ ಕೇಂದ್ರ ಸರ್ಕಾರ ಕೊರೊನಾ ನಿಭಾಯಿಸುವಲ್ಲಿ ಕೂಡ ವಿಫಲವಾಗಿದೆ ಎಂದು ದೂರಿದರು.

ABOUT THE AUTHOR

...view details