ಬೆಂಗಳೂರು:ನಗರದಲ್ಲಿ ರೌಡಿಶೀಟರ್ಗಳ ದ್ವೇಷದ ಆಕ್ರಮಣ ಹಾಗೂ ಹತ್ಯೆ ಪ್ರಕರಣಗಳು ಏರಿಕೆಯಾಗುತ್ತಿದ್ದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಒಬ್ಬೊಬ್ಬರನ್ನೇ ಕರೆಯಿಸಿ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಶನಿವಾರ ರೌಡಿಶೀಟರ್ ಬೇಕರಿ ರಘು ಎಂಬಾತನನ್ನು ಕರೆಸಿದ್ದ ಎಸಿಪಿ ಧರ್ಮೇಂದ್ರ ವಾರ್ನಿಂಗ್ ನೀಡಿ ಕಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಹನುಮಂತನಗರ ಠಾಣೆಯ ರೌಡಿಶೀಟರ್ ಬೇಕರಿ ರಘು, ನಟೋರಿಯಸ್ ರೌಡಿ ಸೈಕಲ್ ರವಿ ಸಹಚರನಾಗಿದ್ದ. ಹಪ್ತಾ ವಸೂಲಿ, ಸುಪಾರಿ ಹತ್ಯೆ, ಅಕ್ರಮ ದಂಧೆ ಸೇರಿದಂತೆ ಸುಮಾರು 20 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಇನ್ನೂ ಏಳು ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿಯಿವೆ.
ಸದ್ಯ ಬೆಂಗಳೂರು ಬಿಟ್ಟು ಆಂಧ್ರದಲ್ಲಿ ಬೇಕರಿ ರಘು ನೆಲೆಸಿದ್ದಾನೆ. ದಕ್ಷಿಣ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಎದುರಾಳಿ ಬಣ ರಘು ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುವುದರ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಆತನನ್ನು ಕರೆಯಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆತನ ಹಾಲಿ ವಾಸದ ವಿಳಾಸ, ಚಟುವಟಿಕೆ, ಆದಾಯದ ಮೂಲದ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ರಘು ಮಾತ್ರವಲ್ಲದೆ ಇನ್ನೂ ಕೆಲವು ಪ್ರಮುಖ ರೌಡಿಗಳ ಪಟ್ಟಿ ಸಿದ್ದಪಡಿಸಿರುವ ಸಿಸಿಬಿ ಪೊಲೀಸರು ಪ್ರತಿಯೊಬ್ಬರನ್ನೂ ಕರೆಸಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.
ನಗರದಲ್ಲಿ ಇತ್ತೀಚಿಗೆ ಇಬ್ಬರು ರೌಡಿಶೀಟರ್ಗಳನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ರೌಡಿ ಕಪಿಲ್ ಹಾಗೂ ಪರಪ್ಪನ ಅಗ್ರಹಾರ ಬಳಿ ಸಿದ್ದಾಪುರ ಮಹೇಶ್ನನ್ನು ಕೊಲೆೆ ಮಾಡಲಾಗಿತ್ತು. ಈ ಇಬ್ಬರ ಹತ್ಯೆ ಬಳಿಕ ನಗರದ ರೌಡಿಗಳ ಮೇಲೆ ಸಿಸಿಬಿ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ.