ಬೆಂಗಳೂರು: ವಿದ್ಯಾವಂತರಾಗಿ ಅಡ್ಡದಾರಿ ಹಿಡಿದಿದ್ದ ಕೇರಳ ಮೂಲದ ನಾಲ್ವರನ್ನು ಪೊಲಿಸರು ಸೆರೆಹಿಡಿದಿದ್ದು, ಇವರು ಆಂಧ್ರದಿಂದ ಮಾದಕ ವಸ್ತುಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೃಷ್ಣನ್, ಮೊಹಮ್ಮದ್, ಹರಿ ಶಂಕರ್, ರಾಹುಲ್ ಬಂಧಿತ ಆರೋಪಿಗಳು. ಇವರು ಆಂಧ್ರದ ವೈಜಾಗ್ನಿಂದ ಮಾದಕ ವಸ್ತುಗಳನ್ನು ತಂದು ತಮ್ಮದೇ ಆದ ಜಾಲ ಸೃಷ್ಟಿಸಿಕೊಂಡು ವಿದ್ಯಾರ್ಥಿಗಳಿಗೆ, ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳು ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸಿಗ್ನಲ್ ಹತ್ತಿರದ ಬಿರಿಯಾನಿ ಹೌಸ್ ಬಳಿ ತಮ್ಮ ಗಿರಾಕಿಗಳನ್ನು ಹುಡುಕುವಾಗ ಮಾಹಿತಿ ತಿಳಿದು ಸಿಸಿಬಿ ಕೇಂದ್ರ ವಿಭಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಇನ್ನು ಆರೋಪಿಗಳ ಬಳಿಯಿಂದ 7 ಕೆ.ಜಿ ತೂಕದ ಗಾಂಜಾ, 70 ಎಲ್.ಎಸ್.ಡಿ, 12 ಕೆ.ಜಿ 300 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 5 ಮೊಬೈಲ್, ಹೊಂಡಾ ಆ್ಯಕ್ಟಿವಾ, ನಗದು ವಶಪಡಿಸಿಕೊಂಡಿದ್ದಾರೆ.
ಇನ್ನು ತನಿಖೆ ವೇಳೆ ಆರೋಪಿಗಳ ಪೈಕಿ ಓರ್ವ ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಮತ್ತೋರ್ವ ಬಿಎಸ್ಸಿ, ಮೆಕಾನಿಕಲ್ ಎಂಜಿನಿಯರಿಂಗ್ ಮಾಡಿದ್ದು, ಹೆಚ್ಚು ಹಣಗಳಿಸುವ ಹುಚ್ಚು ಮನಸ್ಸಿನಿಂದ ಈ ರೀತಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಗಳನ್ನ ತನಿಖೆಗೆ ಒಳಪಡಿಸಿದ್ದು ಡ್ರಗ್ ಪೆಡ್ಲರ್ ಯಾರು, ಇವರ ಹಿಂದೆ ಇನ್ಯಾರ ಕೈವಾಡ ಇದೆ ಅನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.