ಬೆಂಗಳೂರು:''ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ತಾಂತ್ರಿಕ ಸಹಾಯದ ಅಗತ್ಯವಿದೆ. ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹಾಗೂ ಎಫ್ಎಸ್ಎಲ್ ಅಧಿಕಾರಿಗಳ ವರದಿಯನ್ನು ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಆರೋಪಿತ ಅಧಿಕಾರಿಗಳನ್ನು ಬಂಧಿಸಿ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ'' ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ತಾಯಿ- ಮಗುವಿನ ಮೃತದೇಹಗಳ ಹಸ್ತಾಂತರಿಸುವುದಕ್ಕಿಂತ ಮೊದಲೇ ಆರೋಪಿತ ಅಧಿಕಾರಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ವಿಚಾರ ಗಮನಕ್ಕೆ ಬಂದಿದೆ. ಕಾನೂನಿನ ಅನ್ವಯ ಆರೋಪಿಗಳನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ದುರ್ಘಟನೆ ನಡೆದಿರುವುದು ದುರಾದೃಷ್ಟಕರ. ನಿರ್ಲಕ್ಷ್ಯತನದಿಂದ ಈ ಅವಘಡ ಸಂಭವಿಸಿದೆ. ಅದಾಗ್ಯೂ ಸಹ ತನಿಖೆಗೆ ಎಫ್ಎಸ್ಎಲ್ ಅಧಿಕಾರಿಗಳು ಹಾಗೂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ನೀಡುವ ವರದಿಯ ಅಗತ್ಯವಿದೆ. ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು'' ಎಂದರು.