ಬೆಂಗಳೂರು: ಕಳೆದ ಫೆಬ್ರವರಿ 23 ರಂದು ಏರ್ ಶೋ ವೇಳೆ ನಡೆದ ದುರ್ಘಟನೆಯಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಗಳು ಬೆಂಕಿಗೆ ಆಹುತಿಯಾಗಿದ್ದವು.
ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್ಟಿಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ಗಳಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ.
ಅದರಲ್ಲೂ ಯಶವಂತಪುರ ಆರ್ಟಿಒ ಕಚೇರಿಯಲ್ಲಿ ಬೇರೆಲ್ಲಾ ಕಡತಗಳನ್ನು ಬದಿಗಿಟ್ಟು ಏರ್ ಶೋ ದುರ್ಘಟನೆಯಲ್ಲಿ ಕಾರ್ ಕಳೆದುಕೊಂಡವರ ಕೆಲಸವನ್ನು ಮೊದಲು ಮಾಡಿಕೊಡಲಾಗುತ್ತಿದೆ. ಈ ಆರ್ಟಿಒ ವ್ಯಾಪ್ತಿಗೆ ಒಟ್ಟು 44 ಕಾರ್ಗಳು ಬಂದಿವೆ. ಇದರಲ್ಲಿ 26 ಅರ್ಜಿಗಳು ಆರ್ಸಿ ಕ್ಯಾನ್ಸಲೇಷನ್ಗೆ ಅರ್ಜಿ ಹಾಕಿದ್ದು, ಈವರೆಗೂ 20 ಪ್ರಕರಣಗಳ ಗಾಡಿ ರೆಕಾರ್ಡ್ ಕ್ಯಾನ್ಸಲ್ ಮಾಡಿಸಿ, ಟ್ಯಾಕ್ಸ್ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ಉಪ ಸಾರಿಗೆ ಆಯುಕ್ತರಾದ ಬಾಲಕೃಷ್ಣ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕಾರ್ ಮಾಲೀಕರಿಗೆ ಶೀಘ್ರವೇ ಪರಿಹಾರ ಇಲ್ಲಿಂದ ಈ ಪ್ರಮಾಣಪತ್ರ ತೆಗೆದುಕೊಂಡು ಇನ್ಶೂರೆನ್ಸ್ ಅವರ ಬಳಿ ನೀಡಿದ್ರೆ ಅವರಿಗೆ ಸಿಗುವ ಇನ್ಶೂರೆನ್ಸ್ ಮೊತ್ತ ಸಿಗಲಿದೆ. ಹಾಗಾಗಿ ಆರ್ಟಿಒ ಕಡೆಯಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಲಾಗ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ ಒಂದೇ ದಿನಕ್ಕೆ ಆರ್ಟಿಒ ಕೆಲಸ ಮಾಡಿಕೊಟ್ಟಿದ್ದು, ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ ಮಾಲೀಕರಾದ ಸಿಮಿ ತಿಳಿಸಿದರು.
ಉಳಿದ 10 ಆರ್ಟಿಒ ಆಫೀಸ್ಗಳಾದ ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಜಯನಗರ, ಕೆ.ಆರ್.ಪುರಂ, ಚಂದಾಪುರ, ನೆಲಮಂಗಲ, ದೇವನಹಳ್ಳಿ, ಯಲಹಂಕ, ರಾಮನಗರಗಳಲ್ಲೂ ಇದೇ ಸೂಚನೆ ನೀಡಲಾಗಿದ್ದು, ಎಲೆಕ್ಷನ್ ಕೆಲಸವೂ ಬಂದಿರೋದ್ರಿಂದ ವ್ಯತ್ಯಾಸಗಳಾಗ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.