ಬೆಂಗಳೂರು:ಸದನದೊಳಗೆ ದಾಂಧಲೆ ನಡೆಸಿ, ಮೇಜು ಹತ್ತಿ ಕಾರ್ಯ ಕಲಾಪದ ನಿಯಮಾವಳಿಯ ಪುಸ್ತಕವನ್ನು ಪೀಠದತ್ತ ತೂರಿ ತನ್ನ ಗೂಂಡಾಗಿರಿ ಪ್ರವೃತ್ತಿಯನ್ನು ದೇಶಕ್ಕೆ ಪರಿಚಯಿಸಿರುವ ಸಂದರ್ಭದಲ್ಲಿ ಸಂಸದ ಎಲ್.ಹನುಮಂತಯ್ಯ ಮತ್ತು ವಿಧಾನಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆಗಳು 'ದೆವ್ವದ ಬಾಯಿಂದ ಬೈಬಲ್ ನುಡಿದಂತಾಗಿದೆ' ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.
ಕೋವಿಡ್ ಮಹಾಸಂಕಟದಿಂದಾಗಿ ದೇಶ ಮತ್ತು ಜಗತ್ತು ತೀವ್ರ ಸಂಕಟವನ್ನು ಅನುಭವಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವುದನ್ನು ಮರೆತ ಕಾಂಗ್ರೆಸ್, ಕಲಾಪವನ್ನು ಧಿಕ್ಕರಿಸಿ, ಯಾವುದೇ ಚರ್ಚೆ ನಡೆಯದಂತೆ ತಡೆಯೊಡ್ಡಿ, ಸಭ್ಯತೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿತು. ಸಂಸದೀಯ ಸಭೆಗಳಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತು ಆರೋಗ್ಯಪೂರ್ಣ ಚರ್ಚೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸಿದ್ಧಾಂತ ಎನ್ನುವುದನ್ನು ಈ ದೇಶದಲ್ಲಿ ದೀರ್ಘಕಾಲ ಆಳಿದ, ಸಂಸದೀಯ ನಡವಳಿಕೆಗಳ ಬಗ್ಗೆ ಅಪಾರ ಅನುಭವ ಇರುವ ಇಂದಿನ ಕಾಂಗ್ರೆಸ್ ಸಮರ್ಥ ನಾಯಕತ್ವದ ಕೊರತೆಯಿಂದ ಮರೆತಿದೆ. ತನ್ನ ಹೊಣೆಗೇಡಿತನದ ನಡವಳಿಕೆಯಿಂದ ನಗೆಪಾಟಲಿಗೀಡಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಾರ್ಣಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.